ನೀರ ಮೇಲಣ ಗುಳ್ಳೆ


"ನೀರಿನಲ್ಲಿ ಮುಳುಗಿ ನಟನೊಬ್ಬನ ದುರ್ಮರಣ" ಎಂಬ ಶೀರ್ಷಿಕೆಯೊಂದಿಗ ವಾಹಿನಿಯಲ್ಲಿ ಸುದ್ದಿ ಬಿತ್ತರವಾಗುತ್ತಿತ್ತು. "ಈಜು ಬರಲ್ಲ, ಆದ್ರೂ ಶಾಟ್ ಮಾಡೋದಿಕ್ಕೆ ರೆಡಿ, ಮುಂದಿದ್ದನ್ನ ದೇವ್ರು ನೋಡ್ಕೋತಾನೆ ಎಂಬ ನಂಬಿಕೆ ಇದೆ" ಸಾಯುವ ಸ್ವಲ್ಪ ಹೊತ್ತಿನ ಮುಂಚೆ ನಡೆದ ಸಂದರ್ಶನದಲ್ಲಿ ನಟನಾಡಿದ ಕೊನೆಯ ಮಾತುಗಳಾಗಿದ್ದವು ಅವುಗಳು.  "ಈಜು ಬರದೆ ಶಾಟ್ ಮಾಡೋದಿಕ್ಕೆ ಒಪ್ಕೋಬಾರದಿತ್ತು" ಅಲ್ಲೇ ನೆರೆದಿದ್ದ ಜನರು ಮಾತನಾಡಿಕೊಂಡರು. ಸುದ್ದಿ ನೋಡಿ ಟಿವಿ ಆರಿಸಿದ ಚೇತನ್ ಆಫೀಸಿಗೆ ಹೊರಟ. ದಾರಿಯುದ್ದಕ್ಕೂ ಅದೇ ಘಟನೆ ಅವನ ಕಣ್ಮುಂದೆ ಸುಳಿದಾಡುತ್ತಿತ್ತು. ಎಂದಿನಂತೆ ಯಾಂತ್ರಿಕವಾಗಿ ಕೆಲಸ ಮುಗಿಸಿ ಬಂದವನು ಹಾಸಿಗೆಯಲ್ಲುರುಳಿದನು. ಪತ್ನಿ, ಮಕ್ಕಳಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ದೀಪಾವಳಿ ಹಬ್ಬಕ್ಕೆಂದು ಅವರೆಲ್ಲರೂ ಸ್ವಲ್ಪ ದಿನ ಮುಂಚಿತವಾಗಿಯೇ ಊರಿಗೆ ತೆರಳಿದ್ದರು.  "ಏನ್ರೀ ಹಬ್ಬದ ದಿನಗಳಲ್ಲಿಯೂ ನಿಮ್ಮ ಕೆಲಸ ಇದ್ದೇ ಇರ್ತದೆ. ಎಲ್ಲರೂ ಹಬ್ಬಾಂತ ಊರಿಗೆ ಹೊರಟಿದ್ದಾರೆ. ನೀವು ಮಾತ್ರ ಕೆಲಸ, ಕೆಲಸ ಅಂತ ಒದ್ದಾಡ್ತೀರ. ಅಷ್ಟಕ್ಕೂ, ನಿಮ್ಮದೇ ಆಫೀಸ್, ನೀವೇ ಬಾಸ್. ಹಬ್ಬದ ದಿನಗಳಲ್ಲಾದರೂ ಕೆಲಸ ಪಕ್ಕಕ್ಕಿಟ್ಟು ಮನೆಯವರ ಜೊತೆ ಇರಬಾರದಾ? ನೀವೂ ಬಂದಿದ್ದರೆ ಅತ್ತೆ,ಮಾವ,ಅಪ್ಪ, ಅಮ್ಮ ಎಲ್ಲ ಖುಷಿ ಪಡುತ್ತಿದ್ದರು" ಪತ್ನಿ ಹೋಗುವ ಹಿಂದಿನ ದಿನ ಅಸಮಾಧಾನದಿಂದ ನುಡಿದಿದ್ದಳು. ಚೇತನ್ ತುಟಿಪಿಟಿಕ್ಕೆಂದಿರಲಿಲ್ಲ. "ಇವಳಿಗೇನು ಗೊತ್ತು ಕೆಲಸದ ಮಹತ್ವ" ಮನಸ್ಸಲ್ಲೇ ಅಂದುಕೊಂಡನಷ್ಟೆ.
                        ವಿದ್ಯಾಭ್ಯಾಸ ಮುಗಿಸಿದ ಚೇತನ್ ಗೆ ಸರಿಯಾದ ಕೆಲಸ ಸಿಗದೆ ಅವರಿವರ ಕುಹಕದ ಮಾತುಗಳನ್ನು ಕೇಳಬೇಕಾಗಿ ಬಂತು. ಹೇಗೋ ಒಂದಿಷ್ಟು ಸಾಲ ಮಾಡಿ ತನ್ನದೇ ಆದ ಸ್ವಂತ ವ್ಯವಹಾರ ಪ್ರಾರಂಭಿಸಿದ. ಯಾರ ಮಾತುಗಳಿಗೂ ತಲೆ ಕೆಡಿಸಿಕೊಳ್ಳದೆ ಪ್ರಾಮಾಣಿಕವಾಗಿ ದುಡಿದು ಬದುಕನ್ನು ಕಟ್ಟಿಕೊಂಡ. ಸಾವಿರಗಳಿಂದ ಪ್ರಾರಂಭವಾದ ಉದ್ಯಮ ಲಕ್ಷಗಳ ಲಾಭವನ್ನು ತಂದುಕೊಟ್ಟಿತು. ಕೆಲಸವಿಲ್ಲದೆ ಅಪ್ರಯೋಜಕ ಎನಿಸಿಕೊಂಡಿದ್ದ  ಚೇತನ್ ಎಲ್ಲರ ಪ್ರಶಂಸೆಗೆ ಪಾತ್ರನಾದ. ಆದರೂ ಆತನಿಗೆ ಇನ್ನಷ್ಟು ಸಂಪಾದಿಸುವ ಅದಮ್ಯ ಬಯಕೆ. ಅದಕ್ಕಾಗಿ ಹಗಲಿರುಳೆನ್ನದೆ ದುಡಿಯುತ್ತಾನೆ. ತನ್ನ ಮಕ್ಕಳಿಗೆ ಯಾವುದೇ ಕಷ್ಟಗಳನ್ನು ಎದುರಿಸುವ ಪ್ರಮೇಯ ಬರಬಾರದು. "ಛೇ, ಇದೆಲ್ಲ ಇವಳಿಗೇಕೆ ಅರ್ಥವಾಗುವುದಿಲ್ಲ?" ಮನಸ್ಸಲ್ಲಿ ಚಿಂತಿಸಿದ ಚೇತನ್ ಟಿವಿ ಹಾಕಿದರೆ ಮತ್ತದೇ ಸುದ್ದಿ "ಛೇ,ಇವರಿಗೆ ಪ್ರಸಾರ ಮಾಡಲು ಬೇರೆ ವಿಷಯಗಳು ಇಲ್ವಾ?" ಟಿವಿ ಆರಿಸಿ ಮಲಗಿದವನಿಗೆ ಅಲ್ಲೇ ಸಣ್ಣಗೆ ನಿದ್ದೆ ಆವರಿಸಿಕೊಂಡಿತು. ನಿದ್ದೆಯ ಮಧ್ಯದಲ್ಲಿ ಅಸ್ಪಷ್ಟ ಕನಸು. ತಾನು ಸತ್ತು ಹೋದಂತೆ, ಕುಟುಂಬ ದವರೆಲ್ಲ ಅತ್ತು ಗೋಗರೆದಂತೆ. ತಕ್ಷಣ ಎಚ್ಚರವಾಯಿತು ಚೇತನ್ ಗೆ. ಗಂಟಲು ಒಣಗಿತ್ತು, ಮೈ ನಡುಗುತ್ತಿತ್ತು. "ಹೌದು, ಏನಾಗಿದೆ ನನಗೆ? ವಿದ್ಯೆ,ಬುದ್ಧಿ ಎಲ್ಲಾ ಉಪಯೋಗಿಸಿ ಬೆಳಸಿದ ವ್ಯವಹಾರ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಇಂದು ನನ್ನಲ್ಲಿ ಎಲ್ಲಾ ಐಷಾರಾಮಿ ವಸ್ತುಗಳಿವೆ. ಆದರೂ, ಇನ್ನೂ ಸಂಪಾದಿಸುವ ಹಂಬಲ. ಈ ಹಂಬಲದಿಂದ ಮನೆಯವರನ್ನೆಲ್ಲ ಕಡೆಗಣಿಸುವುದು ಎಷ್ಟು ಸರಿ ? ಜೀವನವೆಂದರೆ ನೀರ ಮೇಲಿನ ಗುಳ್ಳೆಯಂತೆ. ಯಾವಾಗ ಮರೆಯಾಗುವುದೋ ತಿಳಿದವರಿಲ್ಲ.  ಒಂದು ಕ್ಷಣ, ನಾನು ಇವತ್ತೋ,ನಾಳೆಯೋ ಸತ್ತು ಹೋದರೆ?" ಆತನ ಹ್ರೃದಯ ವೇಗವಾಗಿ ಬಡಿದುಕೊಳ್ಳತೊಡಗಿತು. ಮತ್ತೊಂದು ಕ್ಷಣವೂ ಕುಳಿತುಕೊಳ್ಳಲಾಗಲಿಲ್ಲ  ಅವನಿಂದ. ತಕ್ಷಣವೇ ಎದ್ದು ಬ್ಯಾಗಿಗೆ ಬಟ್ಟೆ ತುರುಕಲಾರಂಭಿಸಿದ.
                       "ಅರೇ, ಚೇತು...ನೋಡ್ರೀ ಚೇತು ಬಂದಿದ್ದಾನೆ" ಕರೆಘಂಟೆಯ ಶಬ್ದಕ್ಕೆ ಬಾಗಿಲು ತೆರೆದ ಚೇತನ್ ಅಮ್ಮ ಸಂಭ್ರಮದಿಂದ ಉದ್ಗರಿಸಿದಳು. ಏಕೋ, ಅಮ್ಮನ ನಗು ಕಂಡ ಚೇತನ್ ಗೆ ಸಾವಿರ ದೀಪಗಳು ಬೆಳಗಿದಂತೆ ಭಾಸವಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜಾನಕಿ ಮತ್ತು ಅವಳ ನಾಯಿ

ಆಪತ್ಬಾಂಧವ

ಅಂತೂ ನಾನೂ ಒಂದು ಕವನ ಬರೆದೆ