ಅಂತೂ ನಾನೂ ಒಂದು ಕವನ ಬರೆದೆ

ದೀಪಾವಳಿ ಹತ್ತಿರ ಬರುತ್ತಿದ್ದಂತೆ ನಾಲ್ಕಾರು ಪತ್ರಿಕೆಯಲ್ಲಿ ಕಥಾ ಸ್ಪರ್ಧೆ ಬರುತ್ತಿದ್ದಂತೆ ಕಥೆ ಬರೆಯುವ ಕೆಲಸ ಶುರು. ಕಥೆ ಬರೆಯಬೇಕೆಂದರೆ ಅದಕ್ಕೆ ಸರಿಯಾಗಿ ಮನಸ್ಥಿತಿ ಇರಬೇಕು. ಕಲ್ಪಿಸಬೇಕು, ಕಲ್ಪನೆ ದ್ರಶ್ಯವಾಗಿ ಮನಃಪಟಲದಲ್ಲಿ ಹರಿಯಬೇಕು. ಆ ಕಥೆಯಲ್ಲಿ ನಾನೂ ಒಂದು ಪಾತ್ರವಾಗಿ ಇರಬೇಕು. ಓದುಗಳಾಗಿ ವ್ಹಾ ವ್ಹಾ ಎನ್ನಬೇಕು. ಇಷ್ಟೆಲ್ಲಾ ಆದರೆ ಮಾತ್ರವೇ ಬರೆದ ಕಥೆ ತ್ರಪ್ತಿ ತರಲು ಸಾಧ್ಯ. ಹೀಗೆ ನಡೆದ ಘಟನೆಗಳನ್ನು ಅವಲೋಕಿಸುತ್ತಾ, ಪಾತ್ರಗಳನ್ನು ಕಲ್ಪಿಸಿ ಒಂದು ಕರಡು ಪ್ರತಿ ತಯಾರಾಯಿತು. ಅದೇ ಪ್ರತಿ ಅಂತಿಮ ಪ್ರತಿಯಾಗುವಾಗ ಮತ್ತೊಂದಿಷ್ಟು ತಿದ್ದುಪಡಿ. ಇದರ ಮಧ್ಯದಲ್ಲಿ ಬರೆದ ಕಥೆ ಏನೆಂದು ತಿಳಿಯಲು ಅಮ್ಮ ಮಾಡುವ ವ್ಯರ್ಥ ಪ್ರಯತ್ನ. ನನ್ನನ್ನು ನೋಡುತ್ತಾ ಕುಳಿತ ಅಮ್ಮನಿಗೂ ತಾನೂ ಏಕೆ ಏನಾದರೂ ಬರೆಯಬಾರದು ಎನಿಸಿತು. ಆಗ ಕಂಡಿತು ಚಿತ್ರಕ್ಕೆ ಒಂದು ಕವನ ಸ್ಪರ್ಧೆ. "ಏ, ಈ ಚಿತ್ರಕ್ಕೆ ಒಂದು ಕವನ ಸುಲಭವಾಗಿ ಬರೆಯಬಹುದು. ನೀನೇಕೆ ಬರೆಯಬಾರದು?" ನಾನೋ ಕವನದ ವಿಷಯದಲ್ಲಿ ಸೊನ್ನೆ . ಓದಲು ಇಷ್ಟವಿದ್ದರೇನು,ಬರೆಯಲು ಬರಬೇಕಲ್ಲ. ಬೇರೆಯವರು ಬರೆದದ್ದನ್ನು ನೋಡಿ ಎಷ್ಟೋ ಸಲ ಬರೆಯಬೇಕು ಅಂತ ಅನಿಸಿದ್ದಿದೆ. ಪದಗಳು ಮೂಡುವುದಿಲ್ಲ. ಚಿತ್ರ ನೋಡಿದೆ, ಏನೂ ತೋಚಲಿಲ್ಲ "ಅಯ್ಯೋ, ನನ್ನಿಂದಾಗದು. ಇಲ್ಲಿ ಕಥೆಗೆ ಶೀರ್ಷಿಕೆ ಸಿಗದೆ ಪೇಚಾಡುತ್ತಿದ್ದೇನೆ, ಕವನ ಬರೆಯಬೇಕಂತೆ". "ಆಯ್ತು, ನೀನು ಬರೀಬೇಕು ನಾನೇ ಬರೀತೇನೆ, ಎಲ್ಲರೂ ಶಹಬ್ಬಾಸ್ ಎನ್ನಬೇಕು ಅಂತಹದ್ದು"  ಇಂತಹ ಮಾತು ತುಂಬಾ ಸಲ ಹೇಳುತ್ತಿದ್ದಳು, ಮಾಡುತ್ತಿರಲಿಲ್ಲವಾದ್ದರಿಂದ ಅತ್ತ ಲಕ್ಷ್ಯ ಕೊಡಲಿಲ್ಲ. ಸರಿ, ರಾತ್ರಿಯ ಊಟವಾಗಿ,ದೈನಂದಿನ ಧಾರಾವಾಹಿ ಮುಗಿದು ಮಲಗಿಯಾಯಿತು. ನಡು ರಾತ್ರಿಯಲ್ಲಿ ಅಮ್ಮ ಎದ್ದು ಅತ್ತಿತ್ತ ಹೋದಂತಾಯಿತು. ಅಕ್ಕಿ ನೆನೆ ಹಾಕಲು ಮರೆತು ಎದ್ದಿರಬೇಕು ಎಂದುಕೊಂಡೆ. ಸ್ವಲ್ಪ ಹೊತ್ತಿನಲ್ಲಿ "ಏ ಸೌಜನ್ಯ, ನಾನೊಂದು ಕವನ ಬರೆದೆ" ಎಂದಳು. ಎಲ್ಲೋ ಬರೆಯಲಾಗದ್ದನ್ನು ಕನಸಿನಲ್ಲಿ ಹೇಳಿ ತ್ರಪ್ತಿ ಪಡುತ್ತಿರಬೇಕೆಂದು ಸುಮ್ಮನಾದೆ. ಬೆಳಗ್ಗಿನ ಉಪಹಾರದ ನಂತರ ಏನೋ ಮಾತನಾಡುತ್ತಿರಬೇಕಾದರೆ "ರಾತ್ರಿ ಇಡೀ ನಿದ್ದೆ ಇಲ್ಲ. ಕವನ ಬರೆಯಲೇ ಬೇಕೆಂದು ತುಂಬಾ ಯೋಚಿಸಿ ಒಂದು ಕವನ ಬರೆದಿದ್ದೇನೆ" ಎಂದಳು. ಅಂದರೆ? ಇದು ಕನಸಲ್ಲಿ ಮಾತಾಡಿದ್ದಲ್ಲ! " ಮಧ್ಯರಾತ್ರಿ ಎದ್ದು ಬರೆದಿದ್ದೇನೆ, ನಿನ್ನಪ್ಪ ನಾನು ಮನೆ ಲೆಕ್ಖ ಬರೆಯಲು ಕುಳಿತಿದ್ದೇನೆ ಎಂದುಕೊಂಡರು" ಮನೆಯ ಹೊರ,ಒಳ ವ್ಯವಹಾರದ ಲೆಕ್ಕ ದಿನಂಪ್ರತಿ ಬರೆಯುವುದು ಅವಳ ಅಭ್ಯಾಸ. ಸಮಯ ಸಿಕ್ಕದಿದ್ದರೆ ನಡುರಾತ್ರಿಯಾದರೂ ಸರಿಯೇ ಮಾಡಿಯೇ ಬಿಡುವಳು. ದಿನದ ಲೆಕ್ಕಾಚಾರ ತಾಳೆಯಾಗದಿದ್ದರೆ ಸಮಾಧಾನವಿಲ್ಲ. ಅಮ್ಮ ಲೆಕ್ಕಾಚಾರ ಪುಸ್ತಕ ಹಿಡಿದು ಕುಳಿತಳು ಎಂದುಕೊಂಡ ಅಪ್ಪ ಎಲ್ಲೋ ತನ್ನ ನಿದ್ದೆಗೆ ಕತ್ತರಿ ಬಿತ್ತು ಎಂದುಕೊಂಡಿರಬೇಕು. "ಎಲ್ಲಿ ತೋರಿಸು" "ತೋರಿಸ್ತೇನೆ, ಈಗಲ್ಲ ಸರಿಯಾಗಿ ಬರೆದ ಮೇಲೆ. ಇಲ್ಲದಿದ್ದರೆ ಬರೆದಿದ್ದಕ್ಕೆ ಬೆಲೆ ಇರುವುದಿಲ್ಲ" ಎಂದು ಹೊರಟವಳನ್ನು ಬೆಪ್ಪಳಂತೆ ನೋಡುತ್ತಾ ಕುಳಿತೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಪತ್ಬಾಂಧವ

ಜಾನಕಿ ಮತ್ತು ಅವಳ ನಾಯಿ