ಜಾನಕಿ ಮತ್ತು ಅವಳ ನಾಯಿ
ಬೆಳಗ್ಗಿನ ಉಪಹಾರ ಮುಗಿಸಿ ಎಂದಿನಂತೆ ಹೊರಗೆ ಬಂದು ನೋಡುತ್ತೇನೆ ಜಾನಕಿಯ ನಾಯಿ ನೆರೆ ಮನೆಗೆ ಬಂದಿದೆ. “ಇದು ಹೇಗೆ ಸಾಧ್ಯ? ಜಾನಕಿ ಇಲ್ಲವಲ್ಲ, ಮತ್ತೆ ಅವಳ ನಾಯಿ ಹೇಗೆ ಬಂತು?” ಸೂಕ್ಷ್ಮವಾಗಿ ಗಮನಿಸಿದಾಗ ಜಾನಕಿ ನಿಂತಿರುವುದು ಕಂಡಿತು. ಇಲ್ಲಿದೆ ಜಾನಕಿ ನಾಯಿ ಬಂದಿರುವ ಗುಟ್ಟು. “ಅವಳು ಬರದೆ ತಿಂಗಳಾಯಿತಲ್ಲ, ಇವತ್ತು ಬಂದಳೇನು?” ಎಂದುಕೊಂಡೆ. ಜಾನಕಿ ನೆರೆಮನೆಗೆ ಬರುವ ಕೆಲಸದವಳು. ಅವಳೊಂದಿಗೆ ಬಂದು, ಅವಳೊಡನೇ ಇದ್ದು,ಸಂಜೆ ಯಥಾವತ್ ಅವಳೊಡನೇ ಹಿಂತಿರುಗುವುದು ಅವಳ ನಾಯಿಯ ನಿತ್ಯದ ದಿನಚರಿ. ಇಂತಿಪ್ಪ ಜಾನಕಿಯ ನಾಯಿಯೇನು ಪೊಮೊರಿಯನ್,ಲ್ಯಾಬ್ರಡಾರ್, ಜರ್ಮನ್ ಶೆಫ಼ರ್ಡ್ ಅಥವಾ ಇನ್ನಿತರ ಹೆಸರುವಾಸಿ ತಳಿಯದ್ದಲ್ಲ. ಪಕ್ಕಾ ಲೋಕಲ್ ಕಂತ್ರಿ ನಾಯಿ. ಮುದ್ದು ಮುದ್ದಾಗಿ ಇರುವುದೇ ಎಂದರೆ ಅದೂ ಇಲ್ಲ. ಆದರೆ ಸ್ವಾಮಿ ನಿಷ್ಠೆಯ ವಿಷಯದಲ್ಲಿ ಮಾತ್ರ ಯಾವ ತಳಿಯ ನಾಯಿಗೂ ಕಮ್ಮಿ ಇಲ್ಲ ಎನ್ನಬಹುದು. ತನ್ನ ಒಡತಿ ಕೆಲಸಕ್ಕೆಂದು ಎಲ್ಲಿ ಹೋಗುತ್ತಾಳೋ ಆ ಮನೆಯೇ ಅದರ ತಾತ್ಕಾಲಿಕ ವಾಸಸ್ಥಾನ. ಶಿಸ್ತಿನ ವಿಷಯದಲ್ಲಿ ಜಾನಕಿಯ ನಾಯಿ ತುಂಬಾ ಕಟ್ಟುನಿಟ್ಟು. ತನ್ನ ಒಡತಿಯನ್ನು ಬಿಟ್ಟು ಒಂದಿಂಚೂ ಅತ್ತಿತ್ತ ಸರಿಯುವುದಿಲ್ಲ. ಕಣ್ಣಂಚಿನಲ್ಲಿ ಸನ್ನೆ ಮಾಡಿ ಸ್ನೇಹಿತೆಯನ್ನು(ನಾಯಿ) ತನ್ನ ಬಳಿಗೆ ಕರೆಸಿಕೊಂಡು ಚೂರು ಹೊತ್ತು ಆಟ ಆಡಿ, ನಂತರ ನಿದ್ದೆ ಹೋಗುತ್ತದೆ.
ಅದರ ಈ ವಿಶಿಷ್ಠ ಗುಣವೇ ನನ್ನನ್ನು ಅದರತ್ತ ಸೆಳೆಯುತ್ತದೆ. ಆದ್ದರಿಂದ ಅದರ ಚಲನವಲನಗಳನ್ನು ಹೆಚ್ಚಾಗಿ ಗಮನಿಸುತ್ತಿರುತ್ತೇನೆ. ಒಂದು ದಿನ, ಸಂಜೆ ಆರರ ಹೊತ್ತದು. “ಕುಂಯಿ…ಓ” ಎಂದು ನಾಯಿ ಕೂಗಿದ ಸದ್ದು ಕೇಳಿತು. ಮನೆಯ ಹೊರಾಂಗಣದಲ್ಲಿದ್ದ ನಾನು ನೋಡಿದಾಗ, ಮನೆಯ ಗೇಟಿನ ಎದುರಿನ ರಸ್ತೆಯಲ್ಲಿ ಜಾನಕಿಯ ನಾಯಿ ಕುಂಯಿಗುಡುತ್ತಿತ್ತು. ಅತ್ತಿಂದಿತ್ತ ಕುಣಿಯುತ್ತಾ ನೆರೆಮನೆಯ ತೋಟದೆಡೆಗೆ ನೋಡುತ್ತಿತ್ತು. ಅಲ್ಲಿ ಜಾನಕಿ ಏನೋ ಕೆಲಸ ಮಾಡುತ್ತಿದ್ದಳು. ಏನಿರಬಹುದು ಎಂದು ಅವಲೋಕಿಸಿದಾಗ ಸಂಜೆಯ ಐದೂವರೆ ಕಳೆದಿತ್ತು. ಹೊತ್ತು ಮೀರಿದೆಯೆಂದೂ, ಹೊರಡೋಣ ಎಂದು ಒಡತಿಯನ್ನು ಗೋಗರೆಯುತ್ತಿತ್ತು. ಅದರ ಸಮಯ ಪ್ರಜ್ಞೆಗೆ ಮನದಲ್ಲೇ ಭೇಷ್ ಎಂದೆ ನಾನು. ಆ ದೃಶ್ಯ ಮಗುವೊಂದು ಅಮ್ಮನನ್ನು ಪೀಡಿಸುವಂತೆ ಕಾಣುತ್ತಿತ್ತು. ಕೊನೆಗೂ ಕೆಲಸ ಮುಗಿಸಿ ಹೊರಟ ಜಾನಕಿಯ ಹಿಂದೆ ಸಂತಸದಿಂದ ಹೊರಟಿತು.
ಜಾನಕಿಯ ವೈಯಕ್ತಿಕ ವಿಚಾರ ಏನೇ ಇರಲಿ ಅವಳ ಒಂದು ವಿಚಾರದ ಬಗ್ಗೆ ನನಗೆ ಒಂದು ರೀತಿಯ ಮೆಚ್ಚುಗೆ ಇದೆ. ನಮ್ಮ ಬಡಾವಣೆಯಲ್ಲಿ ಸಾಕಷ್ಟು ಮನೆಗಳಿವೆ, ಎಲ್ಲರೂ ಸ್ಥಿತಿವಂತರೇ. ಇರುವ ಬೀದಿ ನಾಯಿಗಳಿಂದ ಉಪಕಾರ ಪಡೆಯುತ್ತಾರೆ. ಅದಕ್ಕೆ ಒಂದು ಹೊತ್ತಿನ ಊಟ ಬಿಡಿ, ಒಂದು ಒಳ್ಳೆಯ ಮಾತೂ ಆಡುವುದಿಲ್ಲ. ಅಂಥಾದ್ದರಲ್ಲಿ, ಬರಿಯ ಕೂಲಿ ಮಾಡಿ ಜೀವಿಸುವ, ಸರಿಯಾಗಿ ನೆಲೆ ಇಲ್ಲದ ಜಾನಕಿ ಒಂದು ಬೀದಿ ನಾಯಿಯಾಗುತ್ತಿದ್ದ ನಾಯಿಗೆ ಆಶ್ರಯ ನೀಡಿರುವುದು ಒಂದು ಮೆಚ್ಚುಗೆಗೆ ಅರ್ಹವಾದ ವಿಚಾರ. ಅದಕ್ಕೆ ತಕ್ಕದಾಗಿದೆ ಆಕೆಯ ನಾಯಿಯ ವರ್ತನೆ. ಇಷ್ಟು ಸ್ಥಿತಿವಂತ ಮನೆಗಳಿದ್ದರೂ ಅವುಗಳೆಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. “ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು” ಎಂಬಂತೆ ತನ್ನ ಒಡತಿಯನ್ನೇ ನೆಚ್ಚಿಕೊಂಡಿದೆ, ನಿಷ್ಠೆಯಿಂದ ಕಾಯುತ್ತದೆ. ಉಪಕಾರ ಸ್ಮರಣೆ ಎಂದರೆ ಇದೇ ಇರಬೇಕು . “ಹೌದು, ನಾಯಿಯ ಹೆಸರೇನು? ಛೇ ಕೇಳಬೇಕಿತ್ತು” ಎಂದು ಬಹಳ ಸಲ ಅಂದುಕೊಳ್ಳುತ್ತೇನೆ. “ಚಿಕ್ಕಮ್ಮ, ಜಾನಕಿಯ ನಾಯಿಯ ಹೆಸರೇನು ಅಂತ ಗೊತ್ತಾಯ್ತು” ನನ್ನ ಬಾಯಿಯಿಂದ ಕೆಲವು ಬಾರಿ ಈ ಮಾತನ್ನು ಕೇಳಿಸಿಕೊಂಡ ನನ್ನಕ್ಕನ ಮಗಳು ಶಾಲೆಯಿಂದ ಬರುತ್ತಲೇ ಹೇಳಿದಳು. “ಏನು?” “ಗುಂಡ ಅಂತೆ, ಜಿಂಶಾ ಹೇಳಿದಳು”. “ಗುಂಡ!” ಎಂದು ಮನದಲ್ಲಿ ಉಚ್ಛರಿಸುತ್ತಾ ನಾನು ಮನೆಯ ಒಳನಡೆದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ