ಆಪತ್ಬಾಂಧವ


ನಾಯಿ ಒಂದೇ ಸಮನೆ ಬೊಗಳಲಾರಂಭಿಸಿತು. ಯಾರಿರಬಹುದೆಂದು ಬಾಗಿಲು ತೆರೆದು ನೋಡಿದಳು ವಿನಯ.  ಅಂಚೆಯವನು ಪತ್ರವೊಂದನ್ನು ಇರಿಸಿ ಹೋಗಿದ್ದ. ತೆರೆದು ನೋಡಿದಳು. ಖ್ಯಾತ ಲೇಖಕ ದಿವಾಣಜಿ ಅವರ ಜನ್ಮ ದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಾಗಿತ್ತು. ಅದರೊಂದಿಗೆ ಇರಿಸಿದ್ದ ಪತ್ರವನ್ನು ಬಿಡಿಸಿ ಓದಿದಳು. “ಕು| ವಿನಯ ಅವರು ದಿವಂಗತ ದಿವಾಣಜಿ ಅವರ ಸ್ಮರಣೆಯ ಪ್ರಯುಕ್ತ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಗಳಿಸಿದ್ದಾರೆ. ಸಮಾರಂಭಕ್ಕೆ ಬಂದು ಸನ್ಮಾನಾದಿಗಳನ್ನು ಸ್ವೀಕಾರ ಮಾಡಬೇಕಾಗಿ ವಿನಂತಿ”. “ಅಮ್ಮಾ.. ನಾನು ಬರೆದು ಕಳಿಸಿದ ಕಥೆಗೆ ಬಹುಮಾನ ಬಂದಿದೆ” ಸಂತಸದಿಂದ ವಿನಯಳ ಸ್ವರ ದೊಡ್ಡದಾಯಿತು. “ಹೌದಾ? ಎಷ್ಟನೇ ಬಹುಮಾನ? ಎಲ್ಲಿ ಕೊಡ್ತಾರೆ? ಯಾವಾಗ?” ಪ್ರಶ್ನೆಗಳ ಸುರಿಮಳೆಗೈದ ವಿನಯಳ ತಾಯಿ ಕವಿತಾ, ಪತ್ರವನ್ನು ಕೈಯಿಂದ ಹಿಡಿದೆಳೆದು ಓದಲಾರಂಭಿಸಿದಳು. “ಓ! ತೃತೀಯ ಬಹುಮಾನ ಬಂದಿದೆ. ಪರ್ವಾಗಿಲ್ಲ. ಆದ್ರೆ ಕಾರ್ಯಕ್ರಮದ ಸ್ಥಳ ಮಾತ್ರ ಮುಂಬಯಿ, ಡೊಂಬಿವಿಲಿ ಪೂರ್ವ ಅಂತ ಉಂಟಲ್ಲ. ಹೇಗೆ ಹೋಗುವುದು? ಅಲ್ಲಿ ನಮ್ಮ ಗುರ್ತದವರು ಅಂತ ಯಾರೂ ಇಲ್ಲಲ್ಲ. ಅಪ್ಪನತ್ರ ಕೇಳ್ಬೇಕಷ್ಟೇ”. ಅಷ್ಟು ಹೇಳಿದ್ದೇ ತಡ ವಿನಯಳ ಉತ್ಸಾಹ ಇಳಿಯಿತು. “ಹೌದಲ್ಲ, ಅಂಜನಕ್ಕ ಇದ್ದಿದ್ರೆ ಒಳ್ಳೇದಿತ್ತು. ಆದ್ರೆ ಅವಳು ಮುಂಬೈಯಿಂದ ಯು.ಎಸ್ ಹೋದಳಲ್ಲಾ" ಮನದಲ್ಲಿ ಅಂದುಕೊಂಡಳು. “ಅಪ್ಪನತ್ರ ಕಾಮತ್ ಅವರತ್ರ ಕೇಳಲಿಕ್ಕೆ ಹೇಳುವ, ಅವರ ಹೆಂಡತಿಯ ತಂದೆ ಮನೆ ಅಲ್ಲೇ ಇರುವುದು. ಅವರಿಗೆ ಜಾಗ ಎಲ್ಲಿ ಅಂತ ಗೊತ್ತಿರಬಹುದು” ಮಗಳ ಸಪ್ಪೆ ಮುಖ ನೋಡಿ ಎಂದಳು ಕವಿತಾ. “ಹೌದು ಅವರತ್ರ ಕೇಳುವ” ವಿನಯಳ ಮುಖ ಅರಳಿತು. ಅವಳ ಮನ ಸಂತಸದಿಂದ ತೇಲಾಡಿತು. 
                                ಮಧ್ಯಾಹ್ನ ಪೇಟೆಯಿಂದ ಬಂದ ವಿನಯಳ ತಂದೆ ರಮೇಶ್ ಎಂದರು “ಕಾಮತ್ ರವರು ಅಂಗಡಿಗೆ ಬರ್ಲಿಲ್ಲ, ಸಂಜೆ ಬರ್ತಾರಾಂತ ನೋಡಬೇಕು”. ಸಂಜೆ ಗಿಡಗಳಿಗೆ ನೀರು ಹಾಕುತ್ತಿದ್ದ ಕವಿತಾಳಿಗೆ ಸರೋಜಳ ನೆನಪಾಯಿತು. “ಹ್ಞಾಂ, ಒಂದು ಕೆಲಸ ಮಾಡಬಹುದು. ನಿನ್ನಪ್ಪನ ದೊಡ್ಡಪ್ಪನ ಮಗಳು ಸರೋಜ ಇಲ್ಲವ? ಅವಳ ಮಗ ನಿಖಿಲ್ ಮುಂಬಯಿಯಲ್ಲಿ ಕೆಲಸಕ್ಕೆ ಸೇರಿದಾನಂತೆ, ಅವನನ್ನು ಕೇಳಬಹುದು” ಮಗಳ ಹತ್ತಿರ ಹೇಳಿದಳು. ಅಮ್ಮನ ಮಾತು ವಿನಯಳಿಗೆ ಒಪ್ಪಿಗೆಯಾಗಲಿಲ್ಲ. “ಬೇಡಮ್ಮ, ಸರೋಜತ್ತೆಯನ್ನು ಕೇಳುದು ಬೇಡ. ಅವರಿಗೆ ಅವ್ರ ಮಗನಿಗೆ ನಾವು ಸುರಭಿಯನ್ನು ಮಾತಾಡಿಸಲಿಲ್ಲ ಅಂತ ಮನಸ್ಸಿನಲ್ಲಿ ಉಂಟು. ಕವಿತಾಳಿಗೆ ಸಿಟ್ಟು ಬಂತು. “ಎಂತ ವಿನು ನೀನು? ಅದೆಲ್ಲ ಆವತ್ತಿನ ವಿಷಯ ಅಲ್ವ? ಅದನ್ನು ಅವಳು ಮರೆತಿದ್ದಾಳೆ. ಸುರಭಿಗೆ ಒಬ್ಬ ಹುಡುಗನ ಮೇಲೆ ಮನಸ್ಸಿತ್ತು. ಅದು ಗೊತ್ತಿದ್ದುದರಿಂದಲೇ ಅಲ್ವಾ ನಾವು ಬೇಡ ಅಂತ ಹೇಳಿದ್ದು. ನಾನು ಆವತ್ತೇ ಆ ವಿಷಯ ಸೂಕ್ಷ್ಮವಾಗಿ ಹೇಳಿದ್ದೇನೆ ಅವಳತ್ರ. ಮತ್ತೆ ಸರೋಜ ಹಾಗೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಎಲ್ಲರನ್ನೂ ನಾವು ಹಾಗೆ ಸಂಶಯಿಸಬಾರದು. ನೆಂಟತನ ಉಳಿಸಿಕೊಳ್ಬೇಕು. ನಾನೊಮ್ಮೆ ಕೇಳಿ ನೋಡ್ತೇನೆ” ಸರಿಯೆಂಬಂತೆ ವಿನಯ  ತಲೆಯಾಡಿಸಿದಳು.
 “ನಿಖಿಲ್ ಗೆ ತುಂಬಾ ಕೆಲಸವಂತೆ, ನಾಳಿದ್ದು ಮನೆಗೆ ಬರುವವನಿದ್ದಾನೆ ಅವನತ್ರ ಫೋನ್ ಮಾಡ್ಲಿಕ್ಕೆ ಹೇಳ್ತೇನೆ ಅಂತ ಹೇಳಿದಳು ಸರೋಜ. ಅವಳು ಹೇಳಿದ ಮಾತು ತಪ್ಪಿಸುವುದಿಲ್ಲ. ನಾನು ಅಪ್ಪನಿಗೆ ಟಿಕೆಟ್ ಬುಕ್ ಮಾಡ್ಲಿಕ್ಕೆ ಹೇಳ್ತೇನೆ, ಇನ್ನು ನಿಖಿಲ್ ಗೆ ಬಿಡುವಿದ್ದು ಅಲ್ಲಿಗೆ ಬರ್ಲಿಕ್ಕಾದ್ರೆ ಒಳ್ಳೆಯದಿತ್ತು” ದೂರವಾಣಿಯಲ್ಲಿ ಮಾತು ಮುಗಿಸಿ ಬಂದ ಕವಿತಾ ಹೇಳಿದಳು.       
                      ದಿನಗಳು ಉರುಳಿದವು. ರಮೇಶ್ ಗೆ ಮುಖ್ಯವಾದ ಕೆಲಸವಿದ್ದುದರಿಂದ ಕವಿತಾ,ವಿನಯ ಮುಂಬೈಗೆ ತೆರಳುವುದು ಎಂದು ನಿರ್ಧಾರವಾಗಿತ್ತು. ಅಗತ್ಯವಿದ್ದ ಬಟ್ಟೆಬರೆ, ವಸ್ತುಗಳೆಲ್ಲ ಬ್ಯಾಗ್ ನಲ್ಲಿ ತುಂಬಿಸಿಯಾಗಿತ್ತು. ಆದರೆ ವಿನಯ ನಿರೀಕ್ಷಿಸಿದಂತೆ ಸರೋಜಾ ಫೋನ್ ಬರಲೇ ಇಲ್ಲ. “ ಛೇ, ಸರೋಜನ ಫೋನ್ ಬರಲೇ ಇಲ್ಲವಲ್ಲ, ಯಾಕೆ ಹೀಗೆ ಮಾಡಿದಳು? ಆಗದಿದ್ರೆ ಒಂದು ಫೋನ್ ಮಾಡಿಯಾದರೂ ಹೇಳಬಹುದಿತ್ತಲ್ಲ, ಅವಳಿಗಿನ್ನೂ ನಮ್ಮ ಮೇಲೆ ಅಸಮಾಧಾನ ಇದೆಯಾ?” ಬೇಸರದಿಂದ ಕವಿತಾ ನುಡಿದಳು. “ಬಿಡಮ್ಮ, ಹೇಳಿದ್ದನ್ನೇ ಎಷ್ಟು ಸಲ ಹೇಳ್ತೀ? ನಾವೇನೂ ತಪ್ಪು ಮಾಡ್ಲಿಲ್ಲ, ಅವ್ರು ಹಾಗೆ ತಿಳ್ಕೊಂಡ್ರೆ ನಾವೇನು ಮಾಡ್ಲಿಕ್ಕಾಗ್ತದೆ? ಅಲ್ಲಿಗೆ ಹೋಗುವುದು ಅಷ್ಟೇನು ಕಷ್ಟ ಇಲ್ಲವಂತೆ. ನಾನು ನನ್ನ ಫ್ರೆಂಡ್ಸ್ ಹತ್ರ ಕೇಳಿದ್ದೇನೆ. ಥಾಣೆ ರೈಲು ನಿಲ್ದಾಣದಲ್ಲಿ ಇಳಿದರೆ ಡೊಂಬಿವಿಲಿಗೆ ಹೋಗುವ ಲೋಕಲ್ ಟ್ರೈನು ಸಿಗುತ್ತದಂತೆ. ಡೊಂಬಿವಿಲಿ ನಿಲ್ದಾಣದಲ್ಲಿ ಇಳಿದರೆ ಬೇಕಾದಷ್ಟು ರಿಕ್ಷಾ ಸಿಗುತ್ತದಂತೆ. ಕಾರ್ಯಕ್ರಮ ಮುಗಿಸಿ ಅದೇ ದಾರಿಯಲ್ಲಿ ವಾಪಾಸು ರೈಲು ಹತ್ತಿದರಾಯ್ತು. ಕಾರ್ಯಕ್ರಮದಿಂದ ನಮ್ಮ ಹಾಗೆ ಬರುವವರು ಯಾರಾದ್ರೂ ಬೇರೆಯವರು ಇದ್ರೆ ಅವರ ಒಟ್ಟಿಗೆ ಬಂದ್ರಾಯ್ತು” ವಿನಯಳೆಂದಳು.
                             ಹೊರಡುವ ದಿನ ಬಂತು. ಮಂಗಳೂರಿನಲ್ಲಿ ಮಧ್ಯಾಹ್ನ ರೈಲು ಹತ್ತಿ , ಥಾಣೆ ಇಳಿದಾಗ ಬೆಳಗ್ಗಿನ ಆರೂವರೆ ಆಗಿತ್ತು. ಹೆಚ್ಚೇನು ಕಷ್ಟವಿಲ್ಲದೆ ಕಾರ್ಯಕ್ರಮ ನಡೆಯುವಲ್ಲಿಗೆ ಕವಿತಾ, ವಿನಯ ತಲುಪಿದರು. ಅದೇ ದಿನ ಮಂಗಳೂರಿಗೆ ಹೊರಡುವ ರೈಲು ಟಿಕೆಟ್ ಮುಂಗಡವಾಗಿ ಖರೀದಿಸಿದ್ದರಿಂದ ಸಂಜೆ ನಾಲ್ಕು ಗಂಟೆಗೆ ನಿಲ್ದಾಣ ತಲುಪಬೇಕಿತ್ತು. ಕಾರ್ಯಕ್ರಮ ಮಧ್ಯಾಹ್ನ ಎರಡು ಗಂಟೆಗೆಲ್ಲಾ ಮುಗಿಯುತ್ತದೆ ಎಂದಿದ್ದರೂ ಮುಗಿಯುವಾಗ ಮೂರಾಯಿತು. “ಇನ್ನು ಒಂದು ಗಂಟೆಯಲ್ಲಿ ನಿಲ್ದಾಣದಲ್ಲಿರಬೇಕು” ಆತಂಕದಿಂದ ವಿನಯ ಹೇಳಿದಳು. “ಇವರು ಇಷ್ಟು ಲೇಟು ಮಾಡ್ತಾರೇಂತ ಗೊತ್ತಿರಲಿಲ್ಲ. ಎಲ್ಲಿಯಾದರೂ ತಡವಾದರೆ..” ಕವಿತಾಳೆಂದಳು. ತಕ್ಷಣವೇ ಹೊರಟರೂ ಥಾಣೆ ತಲುಪುವಾಗ ತಡವಾಗಿ ಹೋಯಿತು. ರೈಲು ಅದಾಗಲೇ ನಿಲ್ದಾಣ ಬಿಟ್ಟು ಹೊರಟಿತ್ತು. “ಛೇ, ಈಗೇನು ಮಾಡುವುದು? ಇನ್ನು ಸ್ವಲ್ಪ ಹೊತ್ತಿಗೆ ಕತ್ತಲಾಗುತ್ತದಲ್ಲ” ವಿನಯ ಚಡಪಡಿಸಿದಳು. ಪಕ್ಕನೇ ಅವಳಿಗೆ ನೆನಪಾದವರು ಕಿಶೋರ್ ಅಂಕಲ್. “ ಅಮ್ಮ, ಕಿಶೋರ್ ಅಂಕಲ್ ಅವರತ್ರ ಸಹಾಯ ಕೇಳಿದ್ರೆ ಹೇಗೆ?” “ಯಾರು?” ಕವಿತಾಳಿಗೆ ನೆನಪಾಗಲಿಲ್ಲ. “ಅದೇ ನನ್ನ ಫ಼ೇಸ್ ಬುಕ್ ಫ಼್ರೆಂಡ್ ಕಿಶೋರ್, ನಮ್ಮ ಊರಿನವರು?” “ಓ, ಅವರಾ? ಹಾಗೆ ಮಾಡುವ” ಕವಿತಾಳಿಗೆ ಮಗಳ ಸಲಹೆ ಸರಿ ಎನ್ನಿಸಿತು.
                        ಸುಮಾರು ನಾಲ್ಕು ತಿಂಗಳ ಹಿಂದೆ ಇರಬೇಕು. ವಿನಯಳಿಗೆ  ಒಬ್ಬ ವ್ಯಕ್ತಿ ಗೆಳೆತನದ ಕೋರಿಕೆಯನ್ನು ಕಳುಹಿಸಿದ್ದರು. ಇದುವರೆಗೆ ಯಾವುದೇ ಅಪರಿಚಿತ ವ್ಯಕ್ತಿಯ ಕೋರಿಕೆಯನ್ನು ಮನ್ನಿಸದ ವಿನಯ ಅವರಿಗೆ “ನೀವ್ಯಾರು? ಎಲ್ಲಿಯವರು?” ಎಂದು ಸಂದೇಶ ಕಳುಹಿಸಿದಳು. “ನಾನು ನಿಮ್ಮ ಊರಿನವನೇ, ಮುಂಬೈ ಗೆ ಬಂದು ನಲುವತ್ತೈದು ವರ್ಷಗಳು ಕಳೆದವು. ಊರಿನವರನ್ನು, ನಮ್ಮ ಜಾತಿಯವರನ್ನು ಕಂಡಾಗ ನಮ್ಮವರು, ನಮ್ಮ ಊರಿನವರು ಎಂಬ ಭಾವನೆ ಉಂಟಾಗುತ್ತದೆ. ಅದಕ್ಕೆ ರಿಕ್ವೆಸ್ಟ್ ಮಾಡಿದ್ದೇನೆ” ಎಂದು ಉತ್ತರ ಬಂತು. ಅಪ್ಪನ ಪ್ರಾಯದವರಿರಬೇಕು, ಏನು ಮಾಡುವುದು ಎಂದು ಚಿಂತಿಸಿದ ವಿನಯ ಕವಿತಾಳನ್ನು ವಿಚಾರಿಸಿದಳು. “ಅಮ್ಮ, ಯಾರೋ ನಮ್ಮ ಊರಿನವರು ಅಂತೆ ಫ್ರೆಂಡ್ ಶಿಪ್ ರಿಕ್ವೆಸ್ಟ್ ಮಾಡಿದ್ದಾರೆ. ಅಪ್ಪನ ಪ್ರಾಯದವರಿರಬೇಕು. ಅಕ್ಸೆಪ್ಟ್ ಮಾಡಲಾ?” “ಹ್ಞೂಂ, ನಂಗೊತ್ತಿಲ್ಲ, ನೀನೇ ನಿರ್ಧಾರ ಮಾಡು” ಎಂದಳು ಕವಿತಾ. ಕೊನೆಗೂ ಅವರ ಕೋರಿಕೆಯನ್ನು ಮನ್ನಿಸಿದ ವಿನಯಳಿಗೆ ಈ ಗೆಳೆತನ ಮುಂದೊಂದು ದಿನ ತನಗೆ ಸಹಾಯವಾಗಬಹುದು ಎಂಬ ಕಲ್ಪನೆ ಕೂಡಾ ಇರಲಿಲ್ಲ.
              “ಅಂತೂ, ಈ ಫ಼ೇಸ್ ಬುಕ್ ನಿಂದಾಗಿ  ಒಳ್ಳೆ ಉಪಕಾರ ಆಯ್ತು ನೋಡಿ , ಇಲ್ಲದಿದ್ರೆ ಮೊನ್ನೆ ನಾವು ಎಷ್ಟು ಕಷ್ಟಪಡಬೇಕಿತ್ತೋ ಏನೋ? ಎಂಥಾ ಒಳ್ಳೆ ವ್ಯಕ್ತಿ ಅವರು? ಫೋನ್ ಮಾಡಿದ ಕೂಡಲೇ ಬಂದು ನಮ್ಮನ್ನು ಮನೆಗೆ ಕರೆದುಕೊಂಡು ಹೋದರು. ಅವರ ಹೆಂಡತಿಯೂ ಅಷ್ಟೇ ಒಳ್ಳೆ ಹೆಂಗಸು. ಎಷ್ಟೋ ವರ್ಷದಿಂದ ಪರಿಚಯ ಇರುವಂತೆ ಮಾತನಾಡಿದರು. ಈಗಿನ ಕಾಲದಲ್ಲಿ ಉಪಯೋಗ ಇಲ್ಲದಿದ್ದರೆ ಯಾರು ಸಹಾಯ ಮಾಡ್ತಾರೆ? ಅಂಥಾದ್ದರಲ್ಲಿ ಗುರುತಿಲ್ಲ, ಪರಿಚಯ ಇಲ್ಲ. ಅದರೂ ನಮ್ಮನ್ನು ಅವರ ನೆಂಟರಂತೆ ಉಪಚರಿಸಿ ಬಸ್  ಹತ್ತಿಸಿ ಬಿಟ್ಟರಲ್ಲ. ಆಪತ್ತಿಗಾದವನೇ ನೆಂಟ ಅಂತ ಇಂಥವರನ್ನು ನೋಡಿಯೇ ಹೇಳಿದ್ದಿರಬೇಕು.” ಮನೆಗೆ ತಲುಪಿದ ನಂತರ ಕವಿತಾ ರಮೇಶನಲ್ಲಿ ನುಡಿದಳು. “ಹೌದು, ಮನುಷ್ಯ ಯಾವಾಗಲೂ ಹಾಗೆ, ಹತ್ತಿರವಿದ್ದಾಗ ಅವನಿಗೆ ಸಂಬಂಧಗಳು ಗೌಣ ಎನಿಸಿಬಿಡುತ್ತದೆ, ತನ್ನ ಊರಿನಿಂದ, ಮನೆಯವರಿಂದ  ದೂರ ಹೋದಾಗಲೇ ಅದರ ಮಹತ್ವ ತಿಳಿಯುವುದು” ನಡೆದ ಘಟನೆಯನ್ನು ಮೆಲುಕು ಹಾಕಿದ ವಿನಯ ತನಗೆ ತಾನೇ ಹೇಳಿಕೊಂಡಳು. “ತ್ಚು..ತ್ಚು..”  ಅವಳ ಮನದ ಮಾತು ಸತ್ಯ ಎನ್ನುವಂತೆ  ಹಲ್ಲಿಯೊಂದು ಅದೇ ಸಮಯಕ್ಕೆ ಲೊಚಗುಟ್ಟಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜಾನಕಿ ಮತ್ತು ಅವಳ ನಾಯಿ

ಅಂತೂ ನಾನೂ ಒಂದು ಕವನ ಬರೆದೆ