ದೆಹಲಿ ಪ್ರವಾಸ,ಪ್ರಯಾಸ -1

ಇದು ನನ್ನ   ಅತ್ಯಂತ  ದೀರ್ಘ ಅವಧಿಯ ಪ್ರಯಾಣ  ಎನ್ನಬಹುದು.  ಮಂಗಳೂರಿನಿಂದ ಹೊರಟು  ಸುಮಾರು ಎರಡು ದಿನ ಮತ್ತು ಕೆಲವು  ಗಂಟೆಗಳ ಪ್ರಯಾಣವದು.  ಪ್ರಯಾಣದ ಮಧ್ಯದಲ್ಲಿ ಇನ್ನೇನು ದಿಲ್ಲಿ ತಲುಪಲು  ಒಂದು ದಿನ ಇದೆ ಎನ್ನುವಲ್ಲಿ ನಾವು ಕುಳಿತ ಸ್ಥಳಕ್ಕೆ ದಂಪತಿಯ ಪ್ರವೇಶವಾಯಿತು. ಆ ರಾತ್ರಿ ಕಳೆದು ಮರುದಿನ ಝಾನ್ಸಿ ಯಲ್ಲಿ ಅವರು ಇಳಿಯುವವರಿದ್ದರು. ಜೊತೆಗೆ ಅವರ ಮೊಮ್ಮಗಳು. ಸ್ವಲ್ಪದರಲ್ಲಿ ನನ್ನ ಅಕ್ಕನ ಮಗಳಿಗೂ ಅವಳಿಗೂ ಸ್ನೇಹವಾಯಿತು. ಉತ್ತರ ಭಾರತೀಯಳಾದ ಅವಳಿಗೋ ಕನ್ನಡ ಕಲಿಯುವ ಆಸೆ. ಇವಳೊಂದಿಗೆ ಹಿಂದಿಯಲ್ಲಿ ಮಾತನಾಡುತ್ತ ಕನ್ನಡ ಕಲಿತುಕೊಳ್ಳುತ್ತಿದ್ದಳು. ಹಾಗೂ ಹೀಗೂ ರಾತ್ರಿ ಕಳೆದು  ಬೆಳಗಿನ ಜಾವ ಕಳೆದ ಸ್ವಲ್ಪದರಲ್ಲೇ ಝಾನ್ಸಿಗೆ ತಲುಪುವುದರಲ್ಲಿದ್ದೆವು.  ರಾಣಿ ಲಕ್ಷ್ಮೀ ಬಾಯಿಯ ಯಶೋಗಾಥೆಯನ್ನು ಹಿಂದಿ ಧಾರವಾಹಿ ವೀಕ್ಷಿಸಿ   ಅವಳ ಅಭಿಮಾನಿಯಾಗಿದ್ದ ನನ್ನ ಮನದಲ್ಲಿ ಹೇಳಲಾರದ ಆನಂದ. "ಅಂಕಲ್ ಜೀ  ಆಪ್ ಕಹಾಂ ಕೆ ರಹ್ನೇ ವಾಲೆ ಹೇಂ" ಎಂದು ಅವರನ್ನು ಕೇಳಿದೆ. "ಝಾನ್ಸಿ" ಎಂದುತ್ತರಿಸಿದ ಕ್ಷಣ ನಾನು ಹುರುಪಿನಿಂದ ಧಾರಾವಾಹಿ ನೋಡಿದ ಬಗ್ಗೆ ವಿವರಿಸಿ ಝಾನ್ಸಿ ಅರಮನೆ ಹೇಗಿದೆ ಎಂದು ಕೇಳಿದೆ. ಝಾನ್ಸಿ  ರಾಣಿಯ ಅರಮನೆ, ಕೋಟೆ ನೋಡುವಂತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮನಸ್ಸು ಹೇಳುತ್ತಿತ್ತು. ಆದರೆ ಆತನ ಮುಖದಲ್ಲಿ ಏನೂ ಬದಲಾವಣೆ ಉಂಟಾಗಲಿಲ್ಲ.  ನಿರ್ಲಿಪ್ತವಾಗಿ ಹೌದೆನ್ನುವಂತೆ ತಲೆ ಆಡಿಸಿ ಸುಮ್ಮನಾದ. ತನ್ನ ಪ್ರದೇಶದ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿದ ಅವನಿಗೆ ಏಕೆ ಸಂತೋಷ ಆಗಲಿಲ್ಲ? ಎಂದು ನಾನು ಯೋಚಿಸುವಂತಾದೆ.
                                       
                          
ದೆಹಲಿಯ ತುಘಲಕ್ ಬಾದ್ ಪ್ರವೇಶ  ಆಗುತ್ತಿದ್ದಂತೆ ಅಲ್ಲಿನ ಕೊಳಚೆ, ಗಲೀಜು, ಎತ್ತ ನೋಡಿದರೂ ಕಾಣುವ ಪ್ಲಾಸ್ಟಿಕ್ ತೊಟ್ಟೆಗಳ ರಾಶಿ  ಕಂಡ ನಾವುಗಳು ಮೋದಿಯ ಸ್ವಚ್ಛ ಭಾರತದ ಕನಸು ನನಸಾಗಲು ಏಳು ಜನ್ಮ ಎತ್ತಿ ಬರಬೇಕು ಎಂದು ಮಾತನಾಡಿಕೊಂಡೆವು. ದೆಹಲಿ ಎಂದರೆ ಸುಂದರ ಪ್ರವಾಸಿ ತಾಣಗಳ  ಬೀಡು ಎಂಬ ನನ್ನ ಕಲ್ಪನೆಗೆ ಅಲ್ಲೇ ತೆರೆ ಬಿದ್ದಿತ್ತು. ಅಂತೂ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಿದ್ದಾಯಿತು. ಮಧ್ಯಾಹ್ನ ಮೂರುವರೆಯ ಸಮಯ. ಅಲ್ಲಿಂದ ಬಸ್ ನಲ್ಲಿ ವಸಂತ್ ಕುಂಜ್ ಗೆ ತೆರಳಿದೆವು.

ನಾವು ಉಳಕೊಂಡಿದ್ದು ವಸಂತ ಕುಂಜ್ ನ  ಪೇಜಾವರ ಶ್ರೀಗಳು ಕಟ್ಟಿಸಿರುವ ಮಠದಲ್ಲಿ . ಅಲ್ಲಿಗೆ ತಲುಪುವಾಗಲೇ ಸಂಜೆ ನಾಲ್ಕು. ಊಟ,ಸ್ನಾನ ಮುಗಿಸಿ ಸ್ವಲ್ಪ ವಿಶ್ರಮಿಸಿ, ನಂತರ  ಅಲ್ಲೇ ಪಕ್ಕದಲ್ಲಿರುವ ಕೃಷ್ಣ ಮಂದಿರ ಕ್ಕೆ ತೆರಳಿದೆವು. ಪ್ರಶಾಂತ ವಾದ  ಮಂದಿರ. ಸುತ್ತಲೂ ಹಸಿರು ಉದ್ಯಾನವನದ ಪರಿಸರವಾದ್ದರಿಂದ ಊರು ಬಿಟ್ಟು ಬಂದ ಅರಿವು ನಮಗಾಗಲಿಲ್ಲ.  ಜೊತೆಗೆ ಮಧ್ಯಾಹ್ನದ ಊಟವೂ ಸಹ ಊರಿನ ದೇವಸ್ಥಾನದ ಊಟವನ್ನು ನೆನಪಿಸಿತ್ತು. ಅಲ್ಲಲ್ಲಿ ಚಿಲಿಪಿಲಿ ಎನ್ನುವ ಹಕ್ಕಿಗಳು, ಅತ್ತಿಂದಿತ್ತ ಓಡಾಡುತ್ತಿದ್ದ ಅಳಿಲುಗಳು ನಮಗೆ ಮನರಂಜನೆಯನ್ನು ನೀಡಿದವು. ಆ ದಿನದ ರಾತ್ರೆಯ ಊಟವನ್ನು  ಮಠದಲ್ಲೇ ಮಾಡಿದೆವು. ಊಟಕ್ಕೆ ಸಾರು, ಸಾಂಬಾರು, ಚಟ್ನಿ ಎಲ್ಲದಕ್ಕಿಂತ ರುಚಿ ಎನಿಸಿದ್ದು ಮಜ್ಜಿಗೆ. ರೈಲಿನ ಪ್ರಯಾಣದ ಅವಧಿಯಲ್ಲಿ ಮೊಸರಿಗಾಗಿ ಪರದಾಡಿದ್ದ ನನಗೆ ಮಜ್ಜಿಗೆ ಅಮೃತ ಸಮಾನ ಎನಿಸಿತು. ಹೊಟ್ಟೆ ತುಂಬಾ ಮಜ್ಜಿಗೆ ಊಟ ಉಂಡು ರೂಮಿನಲ್ಲಿ ಬಿದ್ದುಕೊಂಡೆವು. ಹವೆಯು ಊರಿನದ್ದರಂತೆ ಇದ್ದುದರಿಂದ ತಂದ ಸ್ವೆಟರ್ ಶಾಲುಗಳೆಲ್ಲ ಬ್ಯಾಗ್ ಸೇರಿದವು. 
                                                                                              ಮುಂದುವರೆಯುತ್ತದೆ .... 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜಾನಕಿ ಮತ್ತು ಅವಳ ನಾಯಿ

ಆಪತ್ಬಾಂಧವ

ಅಂತೂ ನಾನೂ ಒಂದು ಕವನ ಬರೆದೆ