ಮನ ಮುದಗೊಳಿಸುವ, ಅನುಭವ ತರಿಸುವ ಪ್ರವಾಸಿ ತಾಣಗಳು

ಮರುದಿನ ಬೆಳಗ್ಗೆ ಎದ್ದಾಗ ಗಂಟೆ ಏಳು. ಆ ದಿನ ವಚನ ಸಾಹಿತ್ಯ ಸಮ್ಮೇಳನದ ದಿನವಾದ್ದರಿಂದ ಮತ್ತು ಆ ಕಾರ್ಯಕ್ರಮದ ಅಂಗವಾಗಿ ಈ ಪ್ರವಾಸ ಯೋಜನೆ ಇದ್ದುದರಿಂದ ಬೇರೆ ತಾಣಗಳನ್ನು ನೋಡುವ ಅಂದಾಜಿನಲ್ಲಿ ನಾವಿರಲಿಲ್ಲ. "ದಿಲ್ಲಿ ಮೇ ಅಕ್ಷರಧಾಮ್ ನಹೀ ದೇಖಾ ತೋ ಕ್ಯಾ ದೇಖಾ?" (ದೆಹಲಿಯಲ್ಲಿ ಅಕ್ಷರಧಾಮ ನೋಡದೆ ಇದ್ದರೆ, ಬೇರೆ  ತಾಣ ನೋಡಿಯೂ ಏನು ಪ್ರಯೋಜನ) ಎಂಬ ಬರಹಗಳನ್ನು ಅಂತರ್ಜಾಲ ದಲ್ಲಿ ಓದಿದ್ದೆ. ಆದರೆ ನಾವು ಬಂದ ರೈಲು ಅಂದುಕೊಂಡಿದ್ದ ಸಮಯಕ್ಕಿಂತ ತಡವಾಗಿ ದೆಹಲಿಗೆ ತಲುಪಿ ಆ ದಿನದ ಅಕ್ಷರಧಾಮದ ಕಾರ್ಯಕ್ರಮ ರದ್ದಾಗಿತ್ತು. ಆದರೆ ಅನಿರೀಕ್ಷಿತವಾಗಿ ಕಾರ್ಯಕ್ರಮದ ಆಯೋಜಕಿ ಬಂದು "ಕಾರ್ಯಕ್ರಮ ಇರುವುದು ನಾಲ್ಕು ಗಂಟೆಗೆ, ನ್ರತ್ಯಕ್ಕಿರುವವರು ಬಿಟ್ಟು ಉಳಿದವರು ಹೋಗುವುದಿದ್ದರೆ ವ್ಯವಸ್ಥೆ ಮಾಡ್ತೇವೆ" ಎಂದಾಗ ನನ್ನ ಸಂತೋಷಕ್ಕೆ ಎಣೆಯೇ ಇಲ್ಲದಂತಾಗಿತ್ತು. ಬೇಗನೆ ತಯಾರಾಗಿ ಹೊರಟ ನಮ್ಮ ತಂಡ ನಾಲ್ಕು ಬಾಡಿಗೆ ಕಾರಲ್ಲಿ ಅಕ್ಷರಧಾಮ ಕ್ಕೆ ಹೊರಟಿತು.  ಸುಮಾರು ಒಂದು ಗಂಟೆಯ ಬಳಿಕ ಗಮ್ಯ ಸ್ಥಳ ತಲುಪಿದೆವು. ಅಕ್ಷರಧಾಮದಲ್ಲಿ ಹಣದ ಚೀಲದ ಹೊರತಾಗಿ ಏನನ್ನೂ ಒಳಗೆ ಒಯ್ಯುವಂತಿಲ್ಲ. ಕುಡಿಯುವ ನೀರಿನಿಂದ ಹಿಡಿದು, ತಿನ್ನಲು, ಶೌಚದ ಹೀಗೆ ಎಲ್ಲಾ ವ್ಯವಸ್ಥೆಯೂ ಇದೆ. ಸರತಿ ಸಾಲಿನ ವ್ಯವಸ್ಥೆ ನೋಡಿದ ನನಗೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ನೆನಪಾಯಿತು. ಅಷ್ಟೊಂದು ಜನರಿದ್ದರೂ ಎಲ್ಲವೂ ಅಚ್ಚುಕಟ್ಟು,ನೂಕು ನುಗ್ಗಲು ಎಳ್ಳಷ್ಟೂ ಇಲ್ಲ. ಒಳಗಡೆ ಪ್ರವೇಶವಾದ ಮೇಲೆ ಪ್ರಾರಂಭದಲ್ಲಿ ಸಿಗುವುದೇ ಪ್ರವೇಶದ ಕೊಠಡಿ ಅಲ್ಲಿ ಐದು ರೂಪಾಯಿ ಕೊಟ್ಟಲ್ಲಿ, ನಿಮಗೆ ಬೇಕಾದ ಭಾಷೆಯಲ್ಲಿ ಕೈಪಿಡಿ ಪ ಸಿಗುತ್ತದೆ. ಅದರಲ್ಲಿ ನೀವು ಏನನ್ನೆಲ್ಲಾ ನೋಡಬಹುದು ಎಂಬ ಬಗ್ಗೆ ಮಾಹಿತಿ ಇದೆ. ನಂತರ ಸಿಗುವುದೇ ಶ್ರೀ ಸ್ವಾಮಿ ನಾರಾಯಣ ಮಂದಿರ. ಕೆತ್ತನೆಗಳಿಂದ ಕೂಡಿದ ಮಂದಿರ ತುಂಬಾ ಸುಂದರವಾಗಿದೆ. ಅದರ ಬಗ್ಗೆ ಪದಗಳಲ್ಲಿ ಹೇಳಲು ಅಸಾಧ್ಯ. ಪ್ರತ್ಯಕ್ಷವಾಗಿ ನೋಡಿದರೆ ಚೆನ್ನ. ಅಷ್ಟೊಂದು ಸ್ಥಳಗಳಿವೆ. ಸಣ್ಣ ಮಕ್ಕಳಿಂದ, ವಯೋವ್ರೃದ್ಧರವರೆಗೆ ಯಾರೂ ಬರಬಹುದಾದಂಥ ಸ್ಥಳವಿದು. ಅಷ್ಟು ವಿಶಾಲವಾಗಿದೆ, ವ್ಯವಸ್ಥಿತವಾಗಿದೆ. ನಿಧಾನವಾಗಿ ನೋಡುವುದಿದ್ದರೆ ಒಂದು ಇಡೀ ದಿನ ಬೇಕು.

ಆದರೆ ಸಮಯದ ಅಭಾವದಿಂದ ಎರಡು ಗಂಟೆಗಳ ಕಾಲ ಸಾಧ್ಯವಾದಷ್ಟು ನೋಡಿದ ನಮ್ಮ ತಂಡ ವಾಪಾಸ್ ಆಯಿತು. ನಂತರ ವಚನ ಸಾಹಿತ್ಯ ಸಮ್ಮೇಳನ ವೀಕ್ಷಿಸಿ, ರಾತ್ರಿಯ ಊಟ ಮುಗಿಸಿದ ನಾವು ಮರುದಿನ  ಬೆಳಗ್ಗಿನ 9:30 ರ ರೈಲಿನಲ್ಲಿ ಊರಿನ ದಾರಿ ಹಿಡಿದೆವು.  ಈ ಪ್ರವಾಸ ನನಗೆ ಹೊಸ ಅನುಭವ ತಂದುಕೊಟ್ಟಿತು.  ಅಮ್ಮ ಬೈದರೂ ಕೇಳದೆ ಹಿಂದಿ ಧಾರಾವಾಹಿ ನೋಡಿ ಕಲಿತ ಹಿಂದಿ ಭಾಷೆ ಉಪಯೋಗಕ್ಕೆ ಬಂತು. ಮಾತಿಗೆ ಮುಂಚಿನ "ಭೈಯ್ಯಾ" ಪದದ ಪ್ರಯೋಗ ಎಷ್ಟು ಪ್ರಯೋಜನಕಾರಿ ಎಂದು ತಿಳಿಸಿಕೊಟ್ಟಿತು. ಊರಿನ ಊಟ,ನಿದ್ದೆಯಿಲ್ಲದೆ ಸಜೆ ತಂದ ಈ ಪ್ರವಾಸದಿಂದ, ಪ್ರಯಾಸದ ಪ್ರವಾಸದಲ್ಲೂ ಮಜವಿದೆ ಎಂದು ಅನಿಸಿದ್ದೂ ಸುಳ್ಳಲ್ಲ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜಾನಕಿ ಮತ್ತು ಅವಳ ನಾಯಿ

ಆಪತ್ಬಾಂಧವ

ಅಂತೂ ನಾನೂ ಒಂದು ಕವನ ಬರೆದೆ