ಅಪಾರ್ಥ
"ಬಚಾವ್, ಬಸ್ ಖಾಲಿ ಉಂಟು ಪುಣ್ಯಕ್ಕೆ" ಬಸ್ ಹತ್ತಿದ ಸುಮ ಕಿಟಕಿ ಪಕ್ಕದ ಸೀಟನ್ನು ಹಿಡಿದು ಅಂದುಕೊಂಡಳು. ಬೆಳಗ್ಗಿನ ಜಾವ ಐದಕ್ಕೆ ಎದ್ದ ಕಾರಣ ಕಣ್ಣೆಳೆಯುತ್ತಿತ್ತು. ಹಣ ಕೊಟ್ಟು ಟಿಕೆಟ್ ಪಡೆದ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದವಳಿಗೆ ಪಕ್ಕದಲ್ಲಿ ಯಾರು ಕೂತರೂ ತಿಳಿಯಲಿಲ್ಲ. ಮೂರು ಜನ ಕುಳಿತುಕೊಳ್ಳುವ ಸೀಟು. ಬಸ್ಸು ಸುಮಾರು ದೂರ ಸಾಗಿರಬೇಕು ಯಾರೋ ಪಕ್ಕದಲ್ಲಿ ಧೊಪ್ಪನೆ ಕುಳಿತ ಅನುಭವ. ಆ ವ್ಯಕ್ತಿಯ ತೊಡೆ ಇವಳ ತೊಡೆಗೆ ತಾಗುತ್ತಿತ್ತು. "ಮಹಿಳೆಯರ ಸೀಟಲ್ವೇ" ಎಂದುಕೊಂಡರೂ ಯಾರಿರಬಹುದೆಂಬ ಕುತೂಹಲದಿಂದ ಸ್ವಲ್ಪವೇ ಕಣ್ಣು ತೆರೆದು ನೋಡಿದಳು. ಕಪ್ಪು ಕನ್ನಡಕ ಧರಿಸಿದ ಗಂಡಸು ಎಂದು ತಿಳಿದ ತಕ್ಷಣ ನಿದ್ದೆ ಹಾರಿ ಹೋಯಿತು. ಚೂರು ಸರಿದು ಆತನ ಮೈ ತಾಕದಂತೆ ಕುಳಿತಳು. ಎಷ್ಟೇ ಜಾಗ್ರತೆ ಮಾಡಿದರೂ ಅತ್ತಿಂದಿತ್ತ ಓಲಾಡುವಾಗ ಮೈ ತಾಗುತ್ತಿತ್ತು. "ಛೇ, ಇಬ್ಬರು ಹೆಂಗಸರ ಮಧ್ಯೆ ಕುಳಿತುಕೊಳ್ಳುವ ಅಗತ್ಯ ಏನಿತ್ತು. ಅದೂ ಲೇಡೀಸ್ ಸೀಟಲ್ಲಿ." ಸುತ್ತಲೂ ಗಮನ ಹರಿಸಿದಳು. ಹೆಂಗಸರು ನಿಂತಿದ್ದರು. "ಇಷ್ಟು ಹೆಂಗಸರು ನಿಂತಿರುವಾಗ ಇವನೊಬ್ಬ ಆರಾಮಾಗಿ ಕುಳಿತಿದ್ದಾನಲ್ಲ" ಮನದಲ್ಲಿ ಬೈದಳು. "ಪಡೀಲು ಬಂತಾ?" ಆತ ಸುಮನಲ್ಲಿ ಕೇಳಿದ."ನನ್ನತ್ರ ಯಾಕೆ ಕೇಳ್ತೀ? ಕಣ್ಣು ಬಿಟ್ಟು ನೋಡು ನಿಂಗೆ ಕಾಣ್ತದೆ ಮಂಗ" ಎಂದು ಮನದಲ್ಲಿ ಬೈದರೂ "ಮುಂದಿನ ಸ್ಟಾಪ್ ಪಡೀಲ್...