ಬಿಗ್ ಬಾಸ್ - ಸಮಾಜದ ಕೈಗನ್ನಡಿ

"ಏನಿದೆ ಬಿಗ್ ಬಾಸ್ ನಲ್ಲಿ ಅಂಥಾದ್ದು? ಒಂದಿಷ್ಟು ಸೆಲೆಬ್ರಿಟೀಸ್ ಇರ್ತಾರೆ. ಟಾಸ್ಕ್ ಕೊಡ್ತಾರೆ , ಅದನ್ನು ಇವ್ರು ಮಾಡಬೇಕು. ಮತ್ತೆ ಒಂದೋ ಎರಡೋ ಲವ್ ಸ್ಟೋರೀಸ್ ಶುರುವಾಗುತ್ತದೆ, ಎಲ್ಲಾ  ಮೊದಲೇ ಪ್ಲಾನ್ ಮಾಡಿರ್ತಾರೆ. ಗಂಡು, ಹೆಣ್ಣು ಕುಣೀತಾರೆ, ನಲೀತಾರೆ. ಆ  ಮಲಯಾಳಂ ಚಾನಲ್ ನೋಡಿ ಕಲೀಬೇಕು ಈ ಕನ್ನಡದವರೆಲ್ಲಾ, ಎಷ್ಟು ನ್ಯಾಚುರಲ್ ಆಗಿ ಇರ್ತಾರೆ "   ಕೇರಳದಲ್ಲಿರುವ ಸಂಬಂಧಿಯೋರ್ವರ ಮಾತು ಕೇಳಿ ಕನ್ನಡಿಗಳಾದ ನನಗೂ ಹಾಗೆ ಅನ್ನಿಸಿತ್ತು.  ಆದರೂ ನಂಗಿಷ್ಟವಾದ ಸೀರಿಯಲ್, ಸಿನೆಮಾದ ವ್ಯಕ್ತಿಗಳೇ ಇದ್ದುದರಿಂದ ಮನಸ್ಸು ತಡೆಯಲಿಲ್ಲ. ಜೊತೆಗೆ ಅವರ ವ್ಯಕ್ತಿತ್ವದ ಪರಿಚಯ, ಏನಿದೆಯೆಂದು ನೋಡಿಯೇ ಬಿಡುವ ಎಂದು ನೋಡಲಾರಂಭಿಸಿದೆವು ಮನೆ ಮಂದಿಯೆಲ್ಲ.  ಸುಂದರವಾದ ಮನೆ, ಮನೆಯೊಳಗೆ ಬೇರೆ ಬೇರೆ ವ್ಯಕ್ತಿತವುಳ್ಳ ಒಂದಷ್ಟು  ಸ್ಪರ್ಧಿಗಳು.  ಕೆಲವರು ನೇರ ಮಾತಿನವರು, ಇನ್ನೂ ಕೆಲವರು ಗುಂಪುಗಾರಿಕೆಯವರು, ತಮ್ಮ ಮಾತಿನಂತೆ ನಡೆಯದವರನ್ನು  ಬೆಣ್ಣೆಯಿಂದ ಕೂದಲನ್ನು ತೆಗೆದಂತೆ ನಾಜೂಕಾಗಿ ಅತ್ತ ಸರಿಸಿಬಿಡುತ್ತಿದ್ದರು. ಒಬ್ಬ  ಅತಿಯಾದ ಮುಂಗೋಪಿ, ಇನ್ನೊಬ್ಬ ವ್ಯಂಗ್ಯವಾಗಿ ಮಾತಾಡುವವನು, ಮತ್ತೊಬ್ಬ ಅಪಹಾಸ್ಯ ಮಾಡುವನು. ಒಬ್ಬಾಕೆ ತುಂಬಾ ಚೆನ್ನಾಗಿ ಅಡಿಗೆ ಮಾಡುತ್ತಾ , ಇತರರನ್ನು ನಯವಾಗಿ ತನ್ನ ಮಾತಿನಂತೆ ನಡೆಸಿಕೊಳ್ಳುವಳು, ಹಿಂದಿನ  ಕಾಲದ ಅತ್ತೆಯಂದಿರಂತೆ. ಕೆಸರಿನ ಮಧ್ಯದಲ್ಲಿನ  ಕಮಲದಂತೆ ನಿಷ್ಕಲ್ಮಶ ವ್ಯಕ್ತಿತ್ವದವರು ಒಬ್ಬರಾದರೆ, ತನ್ನಿರುವಿಕೆಗಾಗಿ ಎಲ್ಲರನ್ನೂ ಧಿಕ್ಕರಿಸುತ್ತಾ ಪ್ರತಿಭಟಿಸುವವರು ಮಗದೊಬ್ಬರು.  ಅಂತೂ ಎಲ್ಲಾ ಸ್ಪರ್ಧಿಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಾ  , ಕೆಲವು  ವಿಷಯಗಳನ್ನು ಹೊರತುಪಡಿಸಿ ನೋಡಿದಾಗ  , ಈ ಎಲ್ಲಾ ವ್ಯಕ್ತಿತ್ವವುಳ್ಳ ವ್ಯಕ್ತಿಗಳು ಸಮಾಜದಲ್ಲಿ , ನಮ್ಮ ಮಧ್ಯೆಯೇ ಇದ್ದಾರೆ ಎಂಬ ಅರಿವಾಗುತ್ತದೆ. ಅನ್ಯಾಯ ನಡೆದಾಗ ಪ್ರತಿಭಟಿಸುವವರು, ಗುಂಪುಗಾರಿಕೆಯ  ಅರಿವಿದ್ದರೂ, ಗುಂಪಿಗೆ ಸೇರದ ಪದವಾಗಬಾರದೆಂದು ಸುಮ್ಮನಿರುವವರು,  ನಯವಾಗಿ ಮಾತಾಡಿ ವಂಚಿಸುವ  ನಯವಂಚಕರು , ತಮ್ಮ ಗೆಲುವಿಗಾಗಿ ಇತರರ ಕಾಲೆಳೆಯುವವರು, ಇತರರ ಏಳಿಗೆಯನ್ನು ಕಂಡೂ ಕಾಣದಂತೆ ನಟಿಸುವ ಅಸೂಯಾಪರರು, ಅಂತೆಯೇ ಇನ್ನೊಬ್ಬರ ಪ್ರಗತಿಯನ್ನು ಕಂಡು ಸಂತಸಪಡುವ ನಿರ್ಮಲ ಮನದವರು , ಪರರ ಸೋಲನ್ನು ಕಂಡು ಮರುಕಪಡುವವರು , ಹಾಗೆಯೇ  ಸಂತಸಪಡುವವರು ಈ ಎಲ್ಲಾ ವ್ಯಕ್ತಿತ್ವದವರನ್ನು ಒಂದೇ ವೇದಿಕೆಯಲ್ಲಿ ನೋಡಬಹುದು.  ಉಳಿವಿಗಾಗಿ  ಹೆಣೆಯುವ  ತಂತ್ರಗಾರಿಕೆಗಳು  ಮತ್ತು  ದಿನ ಬಳಕೆಯ ವಸ್ತುಗಳಿಗಾಗಿ  ತಮ್ಮ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಂಡು  ಟಾಸ್ಕ್ ಗಳನ್ನು ಮಾಡುವ ಸ್ಪರ್ಧಿಗಳ ಶ್ರದ್ಧೆಯನ್ನೂ  ಮೆಚ್ಚತಕ್ಕದ್ದು. ಅಂತಿಮವಾಗಿ ಏನೇ ತಂತ್ರಗಳನ್ನು ನಡೆಸಿದರೂ  ತನ್ನ ಮಾತಿನಂತೆ ನಡೆಸಿಕೊಳ್ಳುವ ಬಿಗ್ ಬಾಸ್ ಮತ್ತು  ವೀಕ್ಷಕರನ್ನು,  ಎಲ್ಲಾ ಮನುಷ್ಯರೂ ನಂಬುವ ಕಾಣದ ಶಕ್ತಿಗೆ  ಹೋಲಿಸಬಹುದು.  ಇಲ್ಲಿ ವೀಕ್ಷಕನೇ ಸೂತ್ರಧಾರ, ಸ್ಪರ್ಧಿಗಳು ಪಾತ್ರಧಾರಿಗಳು .  "ಈಸಬೇಕು , ಇದ್ದು   ಜಯಿಸಬೇಕು" ಎಂಬ ಮಾತು ಇವರಿಗೆ  ಸೂಕ್ತವೆನಿಸುತ್ತದೆ,  ಏನಂತೀರಿ? 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಪತ್ಬಾಂಧವ

ಜಾನಕಿ ಮತ್ತು ಅವಳ ನಾಯಿ

ಅಂತೂ ನಾನೂ ಒಂದು ಕವನ ಬರೆದೆ