ಮತ್ತದೇ ರಾಗ, ಅದೇ ಭಾವುಕ ಕ್ಷಣಗಳು

ಬಹುಶಃ  ಆಗ ನಾನು ಒಂಭತ್ತನೆಯ ತರಗತಿಯಲ್ಲಿ ಇದ್ದಿರಬೇಕು. ವಾರ್ಷಿಕ ಪರೀಕ್ಷೆ ಯ ಸಮಯ.  ಟಿವಿಯಲ್ಲಿ "ಮಾರ್ನಿಂಗ್ ರಾಗ"  ಎನ್ನುವ ಸಿನಿಮಾ ಪ್ರಸಾರವಾಗುತ್ತಿತ್ತು. ಮರುದಿನವೇ ಹಿಂದಿ ಪರೀಕ್ಷೆ. ಭಾಷಾ ವಿಷಯವಾದ್ದರಿಂದ ತಲೆಬಿಸಿ ಇರಲಿಲ್ಲ. "ಆದರೂ ಪರೀಕ್ಷೆ ಹಿಂದಿನ ದಿನ ಸಿನಿಮಾ ನೋಡುವುದೇ?" ಎಂದಿತು ಮನಸ್ಸು.  ಹೇಗೂ ಪರೀಕ್ಷೆ ತಯಾರಿ  ಆಗಿದೆಯಲ್ಲ ,ನೋಡೇಬಿಡುವ ಎಂದುಕೊಂಡೆ. ನನ್ನ ಪುಣ್ಯ ಕ್ಕೆ ಅಮ್ಮ ಮನೆಯಲ್ಲಿ ಇರಲಿಲ್ಲ. ಊರಿಗೆ ಹೋಗಿದ್ದಳು. ಇಲ್ಲದಿದ್ದರೆ ಸಹಸ್ರ ನಾಮಾರ್ಚನೆ ಗ್ಯಾರಂಟಿ.  ರಾತ್ರಿ ಒಂಭತ್ತು ಗಂಟೆಗೆ
ಪ್ರಸಾರ, ಸುಮಾರು ಹನ್ನೊಂದು  ಗಂಟೆಗೆ ಮುಕ್ತಾಯವಾಗಿತ್ತು.  ಸಾಮಾನ್ಯವಾಗಿ ಇರುವ ಮರ ಸುತ್ತುವ ಪಾತ್ರಗಳು ಅದರಲ್ಲಿ ಇರಲಿಲ್ಲ.  ಒಂದು ಮಹಿಳೆಗೂ, ಆಕೆಯ ಗತಿಸಿದ ಗೆಳತಿಯ ಮಗನ ಮಧ್ಯೆ ಏರ್ಪಡುವ ಅಮ್ಮ- ಮಗನ ಸಂಬಂಧ ವನ್ನು ತುಂಬಾ ಚೆನ್ನಾಗಿ ತೋರಿಸಲಾಗಿತ್ತು.  ಹಿರಿಯ ನಾಯಕಿ ಶಬನಂ ಆಜ್ಮಿ ಆ ಮಹಿಳೆಯಾಗಿ ಅಭಿನಯಿಸಿದ್ದರು.ಅಂತಿಮ ದ್ರೃಶ್ಯದಲ್ಲಿ ಒಂದು ಸಂಗೀತ ಕಾರ್ಯಕ್ರಮ.  ಅದರಲ್ಲಿ ಶಬನಂ ಆಜ್ಮಿ "ತಾಯೇ ಯಶೋದಾ" ಎಂದು ಹಾಡಲು ಪ್ರಾರಂಭಿಸುತ್ತಿದ್ದಂತೆ, ನಾನು ಭಾವುಕಳಾದೆ. ಸ್ವಲ್ಪ ಹೊತ್ತಿನಲ್ಲಿ ಕಣ್ಣಿನಿಂದ ನೀರು ಸುರಿಯಲಾರಂಭಿಸಿತು. ಎಷ್ಟು ಪ್ರಯತ್ನ ಪಟ್ಟರೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸುಮಾರು ಹೊತ್ತು ಅದೇ ಸ್ಥಿತಿ ಯಲ್ಲಿ ಇದ್ದೆ. ಯಾಕೆ, ಏನು ಕಾರಣ ಗೊತ್ತಿಲ್ಲ. ಮಗದೊಮ್ಮೆ  ಟಿವಿಯಲ್ಲಿ ಆ ಹಾಡು  ಬಂದಾಗ ಅಮ್ಮನಿಗೆ ಕೇಳಿಸಿದೆ. "ಇದು ತೋಡಿ ರಾಗ" ಎಂದಳು ಅಮ್ಮ.  ಈ ತರಹದ  ಅನುಭವ ಪುನರಾವರ್ತನೆ  ಆಗಿದ್ದು ನಿನ್ನೆ, ಸರಿ ಗಮಪಾ ಲಿಟಲ್ ಚಾಂಪ್ ವೀಕ್ಷಿಸುತ್ತಿರುವಾಗ. ಅನ್ವಿತಾ "ನಾದಮಯ ಈ ಲೋಕವೆಲ್ಲಾ" ಎಂದು ಸುಶ್ರಾವ್ಯವಾಗಿ ಹಾಡಿದಾಗ.ಮತ್ತದೇ ತೋಡಿ ರಾಗ, ಅದೇ ರಾತ್ರಿ ಹನ್ನೊಂದರ ಒಳಗಿನ ಸಮಯ, ಮತ್ತದೇ ಕಣ್ಣುಗಳಲ್ಲಿ ಕಾರಣ ವಿಲ್ಲದೆ ನೀರು ಸುರಿಯುತ್ತಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಪತ್ಬಾಂಧವ

ಜಾನಕಿ ಮತ್ತು ಅವಳ ನಾಯಿ

ಅಂತೂ ನಾನೂ ಒಂದು ಕವನ ಬರೆದೆ