ನೀರ ಮೇಲಣ ಗುಳ್ಳೆ
"ನೀರಿನಲ್ಲಿ ಮುಳುಗಿ ನಟನೊಬ್ಬನ ದುರ್ಮರಣ" ಎಂಬ ಶೀರ್ಷಿಕೆಯೊಂದಿಗ ವಾಹಿನಿಯಲ್ಲಿ ಸುದ್ದಿ ಬಿತ್ತರವಾಗುತ್ತಿತ್ತು. "ಈಜು ಬರಲ್ಲ, ಆದ್ರೂ ಶಾಟ್ ಮಾಡೋದಿಕ್ಕೆ ರೆಡಿ, ಮುಂದಿದ್ದನ್ನ ದೇವ್ರು ನೋಡ್ಕೋತಾನೆ ಎಂಬ ನಂಬಿಕೆ ಇದೆ" ಸಾಯುವ ಸ್ವಲ್ಪ ಹೊತ್ತಿನ ಮುಂಚೆ ನಡೆದ ಸಂದರ್ಶನದಲ್ಲಿ ನಟನಾಡಿದ ಕೊನೆಯ ಮಾತುಗಳಾಗಿದ್ದವು ಅವುಗಳು. "ಈಜು ಬರದೆ ಶಾಟ್ ಮಾಡೋದಿಕ್ಕೆ ಒಪ್ಕೋಬಾರದಿತ್ತು" ಅಲ್ಲೇ ನೆರೆದಿದ್ದ ಜನರು ಮಾತನಾಡಿಕೊಂಡರು. ಸುದ್ದಿ ನೋಡಿ ಟಿವಿ ಆರಿಸಿದ ಚೇತನ್ ಆಫೀಸಿಗೆ ಹೊರಟ. ದಾರಿಯುದ್ದಕ್ಕೂ ಅದೇ ಘಟನೆ ಅವನ ಕಣ್ಮುಂದೆ ಸುಳಿದಾಡುತ್ತಿತ್ತು. ಎಂದಿನಂತೆ ಯಾಂತ್ರಿಕವಾಗಿ ಕೆಲಸ ಮುಗಿಸಿ ಬಂದವನು ಹಾಸಿಗೆಯಲ್ಲುರುಳಿದನು. ಪತ್ನಿ, ಮಕ್ಕಳಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ದೀಪಾವಳಿ ಹಬ್ಬಕ್ಕೆಂದು ಅವರೆಲ್ಲರೂ ಸ್ವಲ್ಪ ದಿನ ಮುಂಚಿತವಾಗಿಯೇ ಊರಿಗೆ ತೆರಳಿದ್ದರು. "ಏನ್ರೀ ಹಬ್ಬದ ದಿನಗಳಲ್ಲಿಯೂ ನಿಮ್ಮ ಕೆಲಸ ಇದ್ದೇ ಇರ್ತದೆ. ಎಲ್ಲರೂ ಹಬ್ಬಾಂತ ಊರಿಗೆ ಹೊರಟಿದ್ದಾರೆ. ನೀವು ಮಾತ್ರ ಕೆಲಸ, ಕೆಲಸ ಅಂತ ಒದ್ದಾಡ್ತೀರ. ಅಷ್ಟಕ್ಕೂ, ನಿಮ್ಮದೇ ಆಫೀಸ್, ನೀವೇ ಬಾಸ್. ಹಬ್ಬದ ದಿನಗಳಲ್ಲಾದರೂ ಕೆಲಸ ಪಕ್ಕಕ್ಕಿಟ್ಟು ಮನೆಯವರ ಜೊತೆ ಇರಬಾರದಾ? ನೀವೂ ಬಂದಿದ್ದರೆ ಅತ್ತೆ,ಮಾವ,ಅಪ್ಪ, ಅಮ್ಮ ಎಲ್ಲ ಖುಷಿ ಪಡುತ್ತಿದ್ದರು" ಪತ್ನಿ ಹೋಗುವ ಹಿಂದಿನ ದಿನ ಅಸಮಾಧಾನದಿಂದ ನುಡಿದಿದ್ದಳು. ಚೇತನ್ ತುಟಿಪಿಟಿಕ್ಕ...