ಮರಳಿ ಬಾ ಬಾಲ್ಯವೇ..



ಹೀಗೆ ಯಾರದೋ ಸಾಮಾಜಿಕ ಜಾಲತಾಣದ ಪುಟಗಳನ್ನು ಕ್ಲಿಕ್ಕಿಸುತ್ತಿರುವಾಗ ಸುಭದ್ರಾ ಕುಮಾರಿ ಚೌಹಾಣರ ಕವಿತೆಯ ಸಾಲು  ಓದಲು ಸಿಕ್ಕಿತು.  
     ಬಾರ್ ಬಾರ್ ಆತೀ ಹೇ ಮುಜ್ ಕೋ ಮಧುರ್ ಯಾದ್ ಬಚ್ ಪನ್ ತೇರೀ,
        ಗಯಾ ಲೇ ಗಯಾ ತೂ  ಜೀವನ್ ಕೀ ಸಬ್ ಸೇ ಮಸ್ತ್ ಖುಷೀ ಮೇರೀ         
ಹೈಸ್ಕೂಲಿನ ದಿನಗಳಲ್ಲಿ ಬಾಯಿಪಾಠ ಮಾಡಿಕೊಳ್ಳುತ್ತಿದ್ದ ಕವಿತೆಯಿದು. ಆಗ ಇದರ ಹಿಂದಿನ ಭಾವದ ಅರಿವಿರಲಿಲ್ಲ. ಏನು ಅರ್ಥಪೂರ್ಣವಾದ ಮಾತುಗಳು ಅವು! ಬಾಲ್ಯವೆಂಬುದು ಒಂದು ಆಹ್ಲಾದಕಾರವಾದ ನೆನಪು. ಅಲ್ಲಿ ದುಗುಡಗಳಿಗೆ ಆಸ್ಪದವಿಲ್ಲ, ನಿನ್ನೆ ನಾಳೆಗಳ ಬಗೆಗಿನ ವ್ಯಥೆಯಿಲ್ಲ. 
ನಾನು ಹೋದದ್ದು ಸರಕಾರೀ ಕನ್ನಡ ಮಾಧ್ಯಮ ಶಾಲೆಗೆ. ಅವು ಪ್ರಾಥಮಿಕ ಶಾಲೆಯ ದಿನಗಳು. ಆಗೆಲ್ಲ ಈಗಿನಂತೆ ಕುರ್ಚಿ ಮೇಜುಗಳ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ತಗ್ಗಿನ ಬೆಂಚುಗಳು. ಕುಳಿತುಕೊಳ್ಳುವುದು,ಬರೆಯುವುದು ಏನಿದ್ದರೂ ಅದರ ಮೇಲೆಯೇ.
ಶಾಲೆಗೆ ಎಂದು ಹೊರಟು ನಿಂತರೆ ನಮ್ಮ ಮನೆಯ ನಾಯಿ ಟಾಮಿ ಕೂಡ ಹೊರಟು ನಿಲ್ಲುತ್ತಿತ್ತು. ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವಳಾದ ನನ್ನನ್ನು ಕಂಡರೆ ಅದಕ್ಕೆ ವಿಶೇಷ ಕಾಳಜಿ . "ಏ ನೋಡಾ, ನಿನ್ನ ಟಾಮಿ ಶಾಲೆಗೆ ಸೇರ್ತದಂತೆ"  ಎಂದು ಗೆಳತಿಯರು ನಗುತ್ತಿದ್ದರು. ಅದರ ಪ್ರೀತಿಯ  ಕಂಡು ನನಗೆ ಜಂಭ ಬರುತ್ತಿತ್ತು. ಶಾಲೆ ಮನೆಗೆ ಹತ್ತಿರವಾದ್ದರಿಂದ ಬುತ್ತಿ ಊಟ ಇರಲಿಲ್ಲ. ಶಾಲೆಯ ದಿನದ ನನ್ನ ನೆಚ್ಚಿನ ಮೇಷ್ಟ್ರು ಸಂತೋಷ್ ಸರ್. ಅವರು ಮಾಡುತ್ತಿದ್ದ ಹಿಂದಿ ಪಾಠ ಕೇಳಲು ಚಂದ ಎನಿಸುತ್ತಿತ್ತು. ಕ್ಲಾಸಿನ ಒಬ್ಬಳು ಹುಡುಗಿ ಹೆಸರು ರೇಖಾ ಹೆಗ್ಡೆ. "ಹೆಗ್ಗಡೆ, ಪೆರ್ಗುಡೆ" ಎಂದು ಹುಡುಗರು ಅವಳನ್ನು ರೇಗಿಸುತ್ತಿದ್ದರು. ನನ್ನ  ಹಿಂದಿನ ಬೆಂಚಿನಲ್ಲಿ ಸೌಭಾಗ್ಯ ಎಂಬ ಹೆಸರಿನ ಹುಡುಗಿ ಕುಳಿತುಕೊಳ್ಳುತ್ತಿದ್ದಳು.  ಟೀಚರ್ ಪಾಠ ಮಾಡುವಾಗ ನಿದ್ದೆ ಮಾಡುವುದು ಅವಳ ನಿತ್ಯದ ದಿನಚರಿಯಾಗಿತ್ತು.  ನಿದ್ದೆ ಮಾಡುತ್ತ ಮುಂದಕ್ಕೆ ವಾಲಿ ಬೀಳಬೇಕು ಅನ್ನುವಷ್ಟರಲ್ಲಿ  " ಸೌಭಾಗ್ಯ ಎಷ್ಟು ಬೆಲ್ಲ ತೂಗಿದೆ? ಏನ, ರಾತ್ರಿ ನಿದ್ದೆ ಮಾಡುವುದಿಲ್ಲವನ ?"  ಟೀಚರ್ ಪ್ರಶ್ನಿಸುತ್ತಿದ್ದರು.  "ರಾತ್ರಿ ಬೀಡಿ ಕಟ್ಟುತ್ತಿದ್ದೆ ಟೀಚರ್" ಅನ್ನುವಳು.  ಚಿಮಿಣಿ ದೀಪದ ಬೆಳಕಿನಲ್ಲಿ  ಬೀಡಿ ಕಟ್ಟುತ್ತಿರುವ ಸೌಭಾಗ್ಯ ಹೇಗೆ ಕಾಣಬಹುದು? ಎಂದು ಕಲ್ಪನೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೆ. ನಮಗೆ ಇದು ತಮಾಷೆಯ ವಿಷಯವಾಗಿತ್ತು.  ತೀರಾ ಬಡತನದ ಕಷ್ಟಗಳು ಹೇಗಿರುತ್ತವೆ ಎಂಬ ಕಲ್ಪನೆ  ಕೂಡ ನನಗಿರಲಿಲ್ಲ.  ನನ್ನ ಪಕ್ಕದಲ್ಲಿ ರೇಷ್ಮಾ ಬೇಗಂ ಕುಳಿತುಕೊಳ್ಳುತ್ತಿದ್ದಳು.  ಮೈ ನವಿರೇಳಿಸುವ ಭೂತದ ಕಥೆಗಳನ್ನು  ಕೇಳಲು ದಿನವೂ ಕಾತರಳಾಗಿರುತ್ತಿದ್ದೆನು. "ಭೂತ ಯಾವ ರೂಪದಲ್ಲಿ ಬೇಕಾದ್ರೂ ಬರಬಹುದು. ಅಪ್ಪ, ಅಮ್ಮನ ರೂಪದಲ್ಲಿ ಸ ಇರ್ತದೆ. ಆದರೆ ಕಾಲು ಮಾತ್ರ ಉಲ್ಟಾ ಇರ್ತದೆ." "ಹೌದಾ" ಎನ್ನುತ್ತಿದ್ದ ನಾನು ರಾತ್ರಿ ಪೇಟೆಯಿಂದ ತಡವಾಗಿ ಬಂದ ಅಪ್ಪನ ಕಾಲುಗಳು ಉಲ್ಟಾ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿ ನಂತರವೇ ಬಾಗಿಲು ತೆರೆಯುತ್ತಿದ್ದೆ.  ಆ ಮುಗ್ಧತೆಯನ್ನು ನೆನೆದರೆ ಈಗ ನಗು ಬರುತ್ತದೆ. ಇಂಥವುಗಳು ಒಂದೆರಡಲ್ಲ.  ಕ್ಲಾಸಿನ ನಳಿನಿ ತರುತ್ತಿದ್ದ ಹುಣಿಸೆ ಬೀಜ, ವಿಜಯನ ಮನೆಯ ಭತ್ತದ ಗದ್ದೆ, ರೇಷ್ಮಾಳ ನೀಳವಾದ ಜಡೆ, ರಾಬಿನ್ ನ ದುಬೈ ಕಂಪಾಸ್ ಬಾಕ್ಸು, ಸೌಮ್ಯಳ ಕೋಲ್ಗೇಟ್ ನಗೆ, ನನ್ನ ನೈಲಾನ್ ಚೀಲ, ಶಾಲೆಯ ಬಾವಿ, ಶಾಲೆಯ ಹಿಂದಿದ್ದ ಪೊಟ್ಟು ಕೆರೆ, ಕಲ್ಲಾಟ, ಮನೆ ಆಟ, ಜಿಬಿಲಿ ಆಟ, ಕೆರೆ-ದಡ ಆಟ , ಅಬ್ಬಬ್ಬಾ! ನೆನಪಿನ ಪುಟಗಳನ್ನು ತೆರೆಯುತ್ತಾ ಹೋದರೆ ಪುನಃ ಆ ಸಮಯ ಬಂದಿದೆಯೇನೋ ಎಂಬ ಭಾಸ.  ಬರಿಯ ನೆನಪು ಎಂದು ಅರಿವಾದ ಕ್ಷಣ  "ಮರಳಿ ಬಾ ಬಾಲ್ಯವೇ" ಎನ್ನುವುದು ನನ್ನ ಮನ.    
    
  






ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜಾನಕಿ ಮತ್ತು ಅವಳ ನಾಯಿ

ಆಪತ್ಬಾಂಧವ

ಅಂತೂ ನಾನೂ ಒಂದು ಕವನ ಬರೆದೆ