ದೂರದ ಬೆಟ್ಟ
"ರ್ರೀ.. ಊಟ ರೆಡಿ, ಊಟ ಮಾಡಿ ಮತ್ತೆ ಟಿವಿ ನೋಡಬಾರದಾ ? ಎಷ್ಟು ಸಲ ಕರೆಯುವುದು ನಿಮ್ಮನ್ನು?" ಹೆಂಡತಿಯ ಕರೆಗೆ ಕಿಡಿ ಕಿಡಿಯಾದ ಸಂದೀಪ "ಆಯ್ತು ಮಾರ್ರಾಯ್ತಿ ಬರ್ತೇನೆ. ನನ್ನಷ್ಟಕ್ಕೆ ಇರಲಿಕ್ಕೂ ಬಿಡುವುದಿಲ್ಲಲ್ಲ ನೀನು " ಎಂದು ಗೊಣಗುತ್ತಾ ಬಂದು ಸರಸರನೆ ಊಟ ಮುಗಿಸಿ ಮತ್ತೆ ಟಿವಿ ನೋಡತೊಡಗಿದ. "ಏನಾಗಿದೆ ಇವರಿಗೆ? ಸರಿಯಾಗಿ ಮುಖ ಕೊಟ್ಟು ಮಾತೂ ಆಡುವುದಿಲ್ಲ. ಆಫೀಸಿಗೆ ಹೋಗಿ ಬರುವುದು, ಟಿವಿ ಮುಂದೆ ಕೂತ್ಕೊಳ್ಳೋದು ಎರಡೇ ಕೆಲಸ. ಮನೆಯಲ್ಲಿ ಹೆಂಡತಿ ಅಂತ ಒಂದು ಪ್ರಾಣಿ ಇದೆ ಅಂತಲೂ ಗೊತ್ತಿಲ್ಲ ಇವರಿಗೆ" ಮನಸ್ಸಿನಲ್ಲಿಯೇ ಗೊಣಗಿಕೊಂಡಳು ವಸುಧಾ.
ವಸುಧಾ ಡಬಲ್ ಗ್ರಾಜುವೇಟ್. ಮದುವೆ ಆದ ನಂತರ ಕೆಲಸಕ್ಕೆ ಹೋಗದೆ ಗಂಡ, ಸಂಸಾರ ಅಂತ ಮನೆಯಲ್ಲಿ ಉಳಿದು ಬಿಟ್ಟಳು. ಬಿಡುವಿನ ವೇಳೆಯಲ್ಲಿ ಸಂಗೀತ, ಹೊಲಿಗೆ ಅಂತ ಹವ್ಯಾಸಗಳನ್ನು ಬೆಳೆಸಿಕೊಂಡಳು. ಸಂದೀಪನೂ ಇದಕ್ಕೆ ತಕರಾರು ತೆಗೆದಿರಲಿಲ್ಲ. . ಒಂದು ದಿನ ತನ್ನ ಸಹೋದ್ಯೋಗಿ ಮನೆಗೆ ಊಟಕ್ಕೆ ಹೋದ ಸಂದೀಪ ಆತನ ಸಹೋದ್ಯೋಗಿಯ ಹೆಂಡತಿ ಸುರಭಿಯನ್ನು ಭೇಟಿ ಮಾಡಿದ. ಸುರಭಿ ಕೆಲಸಕ್ಕೆ ಹೋಗುವ ಹೆಣ್ಣುಮಗಳು. ಸಹಜವಾಗಿಯೇ ಗಂಡಸರಿಗೆ ಸರಿಸಮನಾಗಿ ನಿಂತು ಎಲ್ಲ ಕೆಲಸಗಳನ್ನು ಜಾಣ್ಮೆಯಿಂದ ನಿಭಾಯಿಸುತ್ತಿದ್ದಳು. ಮೊದಲ ಭೇಟಿಯಲ್ಲೇ ಆಕೆಯ ಮಾತಿನ ವೈಖರಿ,ಬುದ್ಧಿವಂತಿಕೆ, ಕಣ್ಣುಗಳ ಹೊಳಪು ಸಂದೀಪನನ್ನು ಆಕರ್ಷಿಸಿತು. "ಇಂಥಾ ಸಂಗಾತಿಯನ್ನು ಪ್ರವೀಣ ನಿಜಕ್ಕೂ ಪುಣ್ಯವಂತ." ಸಂದೀಪನ ಮನಸ್ಸು ಆತನಿಗೆ ಅರಿವಿಲ್ಲದೆಯೇ ವಸುಧಾಳನ್ನು ಸುರಭಿಯ ಜೊತೆ ತುಲನೆ ಮಾಡಲಾರಂಭಿಸಿತು. ಕಛೇರಿಯ ಪಾರ್ಟಿಗೆ ವಸುಧಾ ಸಲ್ವಾರ್ ಹಾಕಿ ತಯಾರಾದಾಗ "ಛೇ ... ಏನಿದು ಸಲ್ವಾರ್ ಹಾಕಿದ್ದೀಯಾ ? ಆ ಸುರಭೀನ ನೋಡು, ಹೇಗೆ ಮಾಡ್ ಆಗಿ ಡ್ರೆಸ್ ಮಾಡ್ಕೊಳ್ತಾಳೆ. ಪಟ ಪಟಾಂತ ಇಂಗ್ಲೀಷ್ ಮಾತಾಡ್ತಾಳೆ, ಅವಳನ್ನು ನೋಡಿಯಾದ್ರೂ ಒಂಚೂರು ಕಲೀಬಾರ್ದಾ?" ಸಿಡುಕಿದ ಸಂದೀಪ್. ಗಂಡನ ಮಾತಿಗೆ ಕಣ್ಣು ತುಂಬಿಕೊಂಡಳು ವಸುಧಾ. ಮೌನವಾಗಿ ಅವನಿಷ್ಟದಂತೆಯೇ ತಯಾರಾದರೂ ಸಂದೀಪನಿಗೆ ಸಮಾಧಾನವಾಗಿರಲಿಲ್ಲ. ಏನಾದರೊಂದು ಕೊರತೆ ತೆಗೆದು ವಸುಧಾಳನ್ನು ವ್ಯಂಗ್ಯವಾಡಿದ. "ಸ್ವಲ್ಪ ದಿನ ತಾಯಿ ಮನೆಗೆ ಹೋಗಿ ಬರುತ್ತೇನೆ. ಆಗ ಗೊತ್ತಾಗುತ್ತದೆ ಇವರಿಗೆ ನನ್ನ ಮಹತ್ವ" ಎಂದು ಹೊರತು ನಿಂತಳು. ಸಂದೀಪನೂ ತಡೆಯಲಿಲ್ಲ.
"ವಸು ತಾಯಿ ಮನೆಗೆ ಹೋಗಿದ್ದಾಳೆ" ಕಾಫಿ ಕುಡಿಯುತ್ತಾ ಸಂದೀಪ್ ಪ್ರವೀಣ ನಲ್ಲಿ ಹೇಳಿದ. "ನೀನು ತುಂಬಾ ಲಕ್ಕಿ ಕಣೋ, ವಸುಧಾ ಅವರು ತುಂಬಾ ಒಳ್ಳೆಯವರು" ಪ್ರವೀಣನೆಂದಾಗ "ಏನು ಲಕ್ಕಿನೋ , ಹಳೆ ಕಾಲದ ಗೌರಮ್ಮನ ಥರ ಇದ್ದಾಳೆ. ಲಕ್ಕಿ ಅಂದ್ರೆ ನೀನಯ್ಯ, ಸುರಭಿ ಅವರು ತುಂಬಾ ಸ್ಮಾರ್ಟ್" ಎಂದ ಸಂದೀಪ. "ಹೌದು ಅದು ನಿಜ. ಆದ್ರೆ ಜೀವನದಲ್ಲಿ ನೆಮ್ಮದಿನೇ ಇಲ್ಲದ ಹಾಗೆ ಅನ್ನಿಸ್ತಿದೆ. ನಾನು ಕೆಲಸಕ್ಕೆ ಸೇರಿದಾಗ ಮನೆಯಲ್ಲಿ ಕಷ್ಟ ಇತ್ತು. ಕೆಲಸಕ್ಕೆ ಹೋಗುವಂತಹ ಹುಡುಗಿ ಬೇಕು ಅಂತ ಸುರಭಿಯನ್ನು ಆಯ್ಕೆ ಮಾಡಿದೆ. ಈಗ ನಾನು ಆರ್ಥಿಕವಾಗಿ ನಾನು ಸುಧಾರಿಸಿದ್ದೇನೆ, ಕೆಲಸ ಬಿಡು ಎಂದರೆ ಅವಳು ಒಪ್ಪುವುದಿಲ್ಲ. ಪ್ರತಿಯೊಂದಕ್ಕೂ ನಿನ್ನ ಮುಂದೆ ಕೈ ಚಾಚಲು ತಯಾರಿಲ್ಲ ಅನ್ನುತ್ತಾಳೆ. ನನ್ನನ್ನು ಕಾಯುವ ಕಣ್ಣುಗಳಿಗಾಗಿ ಮನಸ್ಸು ಬಯಸುತ್ತದೆ ಒಮ್ಮೊಮ್ಮೆ, ಏನು ಮಾಡುವ ಹಾಗಿಲ್ಲ. ನಿಂಗೆ ಆ ಪ್ರಾಬ್ಲಮ್ ಇಲ್ಲ. ಕೆಲಸ ಮುಗಿಸಿ ಹಾಯಾಗಿ ಮನೆಗೆ ಹೋದರೆ ಸಾಕು, ವಸುಧಾ ಅವರು ಬಿಸಿ ಕಾಫಿಯೊಂದಿಗೆ ರೆಡಿ ಆಗಿರ್ತಾರೆ. ನೀನು ಹೇಳಿದ ಮಾತು ಅವರಿಗೆ ಸಂಗೀತದಂತೆ". "ಅಂದ್ರೆ ನೀನು ಸುಖಾವಾಗಿಲ್ಲ ಅಂತೀಯಾ?" ಸಂದೀಪ ಪ್ರಶ್ನಿಸಿದ. "ಖಂಡಿತವಾಗಿ ಅಂತ ಹೇಳುವುದಿಲ್ಲ. ನಿನ್ನ ದೃಷ್ಟಿಯಲ್ಲಿ ನಾನು, ನನ್ನ ದೃಷ್ಟಿಯಲ್ಲಿ ನೀನು ಸುಖಿ. ದೂರದ ಬೆಟ್ಟ ನುಣ್ಣಗೆ ಎನ್ನುತ್ತಾರಲ್ಲ ಹಾಗೆ" ಎಂದು ನಕ್ಕ ಪ್ರವೀಣ. ಸ್ವಲ್ಪದರಲ್ಲಿಯೇ ಸಂದೀಪ ಫೋನ್ ಕೈಗೆತ್ತಿಕೊಂಡು ಕರೆ ಮಾಡಲಾರಂಭಿಸಿದ. ಫೋನಿನಲ್ಲಿ ವಸುಧಾಳ ಹೆಸರು ಕಾಣುತ್ತಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ