ಅಪಾರ್ಥ


"ಬಚಾವ್, ಬಸ್ ಖಾಲಿ ಉಂಟು ಪುಣ್ಯಕ್ಕೆ" ಬಸ್ ಹತ್ತಿದ ಸುಮ ಕಿಟಕಿ ಪಕ್ಕದ ಸೀಟನ್ನು ಹಿಡಿದು ಅಂದುಕೊಂಡಳು. ಬೆಳಗ್ಗಿನ ಜಾವ ಐದಕ್ಕೆ ಎದ್ದ ಕಾರಣ ಕಣ್ಣೆಳೆಯುತ್ತಿತ್ತು. ಹಣ ಕೊಟ್ಟು ಟಿಕೆಟ್ ಪಡೆದ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದವಳಿಗೆ ಪಕ್ಕದಲ್ಲಿ ಯಾರು ಕೂತರೂ ತಿಳಿಯಲಿಲ್ಲ. ಮೂರು ಜನ ಕುಳಿತುಕೊಳ್ಳುವ ಸೀಟು. ಬಸ್ಸು ಸುಮಾರು ದೂರ ಸಾಗಿರಬೇಕು ಯಾರೋ ಪಕ್ಕದಲ್ಲಿ ಧೊಪ್ಪನೆ ಕುಳಿತ ಅನುಭವ. ಆ ವ್ಯಕ್ತಿಯ ತೊಡೆ ಇವಳ ತೊಡೆಗೆ ತಾಗುತ್ತಿತ್ತು. "ಮಹಿಳೆಯರ ಸೀಟಲ್ವೇ" ಎಂದುಕೊಂಡರೂ ಯಾರಿರಬಹುದೆಂಬ ಕುತೂಹಲದಿಂದ ಸ್ವಲ್ಪವೇ ಕಣ್ಣು ತೆರೆದು ನೋಡಿದಳು.  ಕಪ್ಪು ಕನ್ನಡಕ ಧರಿಸಿದ ಗಂಡಸು ಎಂದು ತಿಳಿದ ತಕ್ಷಣ ನಿದ್ದೆ ಹಾರಿ ಹೋಯಿತು. ಚೂರು ಸರಿದು ಆತನ ಮೈ ತಾಕದಂತೆ ಕುಳಿತಳು. ಎಷ್ಟೇ ಜಾಗ್ರತೆ ಮಾಡಿದರೂ ಅತ್ತಿಂದಿತ್ತ ಓಲಾಡುವಾಗ ಮೈ ತಾಗುತ್ತಿತ್ತು. "ಛೇ, ಇಬ್ಬರು ಹೆಂಗಸರ ಮಧ್ಯೆ ಕುಳಿತುಕೊಳ್ಳುವ ಅಗತ್ಯ ಏನಿತ್ತು. ಅದೂ ಲೇಡೀಸ್ ಸೀಟಲ್ಲಿ." ಸುತ್ತಲೂ ಗಮನ ಹರಿಸಿದಳು. ಹೆಂಗಸರು ನಿಂತಿದ್ದರು. "ಇಷ್ಟು ಹೆಂಗಸರು ನಿಂತಿರುವಾಗ ಇವನೊಬ್ಬ ಆರಾಮಾಗಿ ಕುಳಿತಿದ್ದಾನಲ್ಲ" ಮನದಲ್ಲಿ ಬೈದಳು.  "ಪಡೀಲು ಬಂತಾ?"  ಆತ ಸುಮನಲ್ಲಿ ಕೇಳಿದ."ನನ್ನತ್ರ ಯಾಕೆ ಕೇಳ್ತೀ? ಕಣ್ಣು ಬಿಟ್ಟು ನೋಡು ನಿಂಗೆ ಕಾಣ್ತದೆ ಮಂಗ" ಎಂದು ಮನದಲ್ಲಿ ಬೈದರೂ "ಮುಂದಿನ ಸ್ಟಾಪ್ ಪಡೀಲ್" ಎಂದಳು.  ಬಸ್ಸಿನಲ್ಲಿ  ಹೋಗುವಾಗ ಆಕೆಗೆ ಒಂದೆರಡು ಬಾರಿ ಅಹಿತಕರ ಅನುಭವವಾಗಿತ್ತು.  ಇನ್ನು ಹೀಗೆ ಮಾತನಾಡಿ ನಂಬರು ಕೇಳುವ ಪ್ಲಾನ್ ಇವನದ್ದು. ಹೀಗೆಲ್ಲ ಯೋಚಿಸುತ್ತಿರುವಾಗ ಪಡೀಲ್ ಬಂತು. ಕಂಡಕ್ಟರ್ ಕೂಗಿಗೆ ತಕ್ಷಣ ಎದ್ದ ಕಪ್ಪು ಕನ್ನಡಕದವ. ಸುಮಳಿಗೆ ಸಮಾಧಾನವಾಯಿತು. ಎದ್ದವನು ಯಾವುದಕ್ಕೋ ತಡಕಾಡಿದನು. ಕೂಡಲೇ ಅವನ ಎಡ ಬದಿಯಲ್ಲಿ ಕುಳಿತ ಹೆಂಗಸು ಏನನ್ನೋ ಕೊಟ್ಟು ಆತನಿಗೆ ಇಳಿಯಲು ಅನುವು ಮಾಡಿಕೊಟ್ಟಳು. "ಏನದು? ವಾಕಿಂಗ್ ಸ್ಟಿಕ್? ಅಂದರೇ..... ಆತ ಕುರುಡ???" ಸುಮ ತನ್ನನ್ನು ತಾನೇ ಹಳಿದುಕೊಂಡಳು. ಆಕೆಯ ಅಂತರಾತ್ಮ ಅಪರಾಧಿ ಭಾವದಿಂದ ನರಳಿತು, ಕಣ್ಣುಗಳು ಇಳಿಯುತ್ತಿದ್ದ ಅವನನ್ನು ದಿಟ್ಟಿಸಿ ನೋಡುತ್ತಿತ್ತು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜಾನಕಿ ಮತ್ತು ಅವಳ ನಾಯಿ

ಆಪತ್ಬಾಂಧವ

ಅಂತೂ ನಾನೂ ಒಂದು ಕವನ ಬರೆದೆ