ಮತ್ಸ್ಯಲೋಕದಲ್ಲಿ ಒಂದು ದಿನ!
ದೇವಸ್ಥಾನಕ್ಕೆ ಹೋಗದೆ ತುಂಬಾ ದಿನಗಳಾಗಿತ್ತು. ಎಲ್ಲಿಗಾದರೂ ಹೋಗಬೇಕು, ಎಲ್ಲಿಗೆ ಎಂದು ಒಂದಿಷ್ಟು ಸ್ಥಳಗಳ ಚರ್ಚೆಯಾಯಿತು. ಕಾರಿಂಜ? ಉಹೂಂ , ಈ ಬಿಸಿಲಿಗೆ ಮೆಟ್ಟಿಲು ಹತ್ತಿ ಇಳಿಯುವುದು ಬೇಡ ಎಂದಳು ಅಮ್ಮ. ಸುರಿಯ, ಕಟೀಲು, ಧರ್ಮಸ್ಥಳ, ಸೌತಡ್ಕ ಯಾವುದಾದರೂ ಒಂದಕ್ಕೆ ಹೋಗೋಣ ಎಂದಳು. "ಹೋದಲ್ಲಿಗೆ ಎಷ್ಟು ಸಲ ಹೋಗುವುದು, ಉಹೂಂ ಬೇಡ" ಎಂದೆ ನಾನು. ಹೀಗೆ ಯಾವುದೋ ಪುಸ್ತಕ ತಿರುವಿ ಹಾಕುತ್ತಿದ್ದಾಗ ಶಿಶಿಲೇಶ್ವರ ದೇವಸ್ಥಾನದ ಬಗೆಗಿನ ವಿವರಗಳು ಕಂಡವು. "ಇದ್ಯಾವ ದೇವಸ್ಥಾನ? ನಾವು ಹೋಗಲೇ ಇಲ್ಲವಲ್ಲ ಒಂದು ಸಲವೂ?" ನಾನೆಂದಾಗ "ಇಲ್ಲ, ತುಂಬಾ ವರ್ಷಗಳ ಹಿಂದೆ ಹೋಗಿದ್ದ ನೆನಪು " ಎಂದಳು ಅಮ್ಮ. ಅಲ್ಲಿನ ನದಿ,ತೂಗುಸೇತುವೆ, ಮುಖ್ಯವಾಗಿ ಮೀನುಗಳು ಅದಾಗಲೇ ನನ್ನ ಮನಸ್ಸನ್ನು ಆಕರ್ಷಿಸಿದ್ದವು. ಸರಿ, ಚಿಕ್ಕದಾಗಿ ಒಂದು ಪಿಕ್ನಿಕ್ ಆದ ಹಾಗೆ ಆಯ್ತು, ಅಲ್ಲಿಗೇ ಹೋಗುವುದೆಂದು ತೀರ್ಮಾನವಾಯಿತು. ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಶಿಶಿಲ ಎಂಬ ಗ್ರಾಮದಲ್ಲಿರುವ ಶ್ರೀ ಶಿಶಿಲೇಶ್ವರ ದೇವಸ್ಥಾನ, ಧರ್ಮಸ್ಥಳದಿಂದ ಸುಮಾರು ಮೂವತ್ತೆರಡು ಕಿ.ಮೀ ದೂರದಲ್ಲಿದೆ. ಮರುದಿನ ಬೆಳಿಗ್ಗೆ ಒಂಭತ್ತಕ್ಕೆ ಮನೆಯಿಂದ ಹೊರಟು, ಅಲ್ಲಿಗೆ ತಲುಪುವಾಗ ಗಂಟೆ ಹತ್ತೂಕಾಲು. ಹೊರಗಿನ ಜಗತ್ತು ಮತ್ತೆ ದೇವಸ್ಥಾನದ ಪರಿಸರದ ಮಧ್ಯೆ ಹರಿಯುತ್ತಿರುವ ಕಪಿಲಾ ನದಿ. ನದಿಯ ಎರಡೂ ತೀರಗಳನ್ನು ಸಂಪರ್ಕಿಸುವ ಒಂದು ಮಾರ್ಗ ಮತ್ತು ಒಂದು ತೂಗು ಸೇತುವೆ. ಬಹುಶ: ಮಳೆಗಾಲದಲ್ಲಿ ನೀರು ತುಂಬಿ ಹರಿಯುವುದರಿಂದ ಪರ್ಯಾಯ ಮಾರ್ಗವಾಗಿ ಆ ಸೇತುವೆಯನ್ನು ನಿರ್ಮಿಸಿರಬಹುದೆಂದು ನನ್ನ ಅನಿಸಿಕೆ . ಸುಂದರವಾದ, ಪ್ರಶಾಂತ ಪರಿಸರ. ಕಪಿಲಾ ನದಿಯ ತೀರದಲ್ಲಿ ಉಪಸ್ಥಿತರಾದ ಶಿವ, ದುರ್ಗೆ, ಮಹಾಗಣಪತಿ . ದೇವಸ್ಥನಾದ ಹೊರ ಆವರಣದಲ್ಲಿರುವ ಆಂಜನೇಯನ ಗುಡಿ. ಗುಡಿಯ ಹತ್ತಿರವಿರುವ ಮೆಟ್ಟಿಲುಗಳನ್ನಿಳಿದರೆ ನದಿಯಲ್ಲಿ ಈಜಾಡುವ ಮೀನುಗಳು . ಮೀನುಗಳಿಗಿರುವ ಆಹಾರವಾದ , ಹೊದಳು ಅಥವಾ ಅರಳು ಅಕ್ಕಿ ಆವರಣದಲ್ಲೇ ಸಿಗುತ್ತದೆ. ನದಿಯ ನೀರಿನಲ್ಲಿ ಅತ್ತಿಂದಿತ್ತ ಈಜುತ್ತಾ, ಆಹಾರಕ್ಕಾಗಿ ಹೊಯ್ದಾಡುತ್ತಿರುವ ಬೃಹದಾಕಾರದ ಮೀನುಗಳು, ಅಲ್ಲಲ್ಲಿ ಚೆಲ್ಲಿದ ಅಕ್ಕಿಯನ್ನು ಹೆಕ್ಕಿ ತಿನ್ನುವ ಪಾರಿವಾಳಗಳನ್ನು ನೋಡುತ್ತಾ ಕುಳಿತರೆ ಹೊತ್ತು ಹೋದದ್ದೇ ತಿಳಿಯುವುದಿಲ್ಲ . ಈ ನದಿಯಲ್ಲಿರುವ ಮೀನುಗಳನ್ನು ದೇವರ ಮೀನು ಎಂದು ಕರೆಯಲಾಗುತ್ತದೆ. ಹಾಗಾಗಿ ಈ ಮೀನುಗಳನ್ನು ಮುಟ್ಟಬಾರದು ಎಂಬ ನಿಯಮವಿದೆ(ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ! ). ಆಂಜನೇಯನ ಗುಡಿಗಿರುವ ಮೀನಿನ ಆಕಾರದ ಬೀಗವನ್ನು ನೋಡಿದರೆ ಮೀನುಗಳಿಗಿರುವ ಪ್ರಾಧಾನ್ಯತೆಯನ್ನು ತಿಳಿಯಬಹುದು. ಇನ್ನು ಹಸಿವು ನೀಗಿಸಲು ಒಂದು ಪುಟ್ಟ ಹೋಟೆಲ್, ಅಲ್ಲೇ ನಿಲ್ಲ ಬಯಸುವವರಿಗೆ ರೂಮುಗಳು ಲಭ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ. ವಿಶೇಷ ದಿನಗಳಲ್ಲಿ ಮತ್ತು ಸೋಮವಾರದಂದು ದೇವಸ್ಥಾನದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮವೂ ಇದೆ. ಸದಾ ಗಿಜಿಗುಟ್ಟುತ್ತಾ, ಜನರಿಂದ ತುಂಬಿ ತುಳುಕುತ್ತಿರುವ ದೇಗುಲಗಳಲ್ಲಿ ಭಕ್ತಿ ಬಿಡಿ, ಒಮ್ಮೆ ಸೇವೆ ಮುಗಿಸಿ ಹೊರಗೆ ಬಂದರೆ ಸಾಕಪ್ಪ! ಅನ್ನಿಸಿಬಿಡುತ್ತದೆ. ಅಂತಹುದರಲ್ಲಿ, ಹೆಚ್ಚು ಕಮ್ಮಿ ನಿರ್ಜನವೆನಿಸುವ, ನದಿಯ ತಟದಲ್ಲಿರುವ ಈ ದೇವಸ್ಥಾನ ಎಲ್ಲರಿಗೂ, ಅದರಲ್ಲೂ ನಗರವಾಸಿಗಳಿಗೆ ಪ್ರಿಯವೆನ್ನಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಸ್ನೇಹಿತರೆ, ತಡಮಾಡದೇ ಇಂದೇ ಭೇಟಿ ನೀಡಿ ಶ್ರೀ ಶಿಶಿಲೇಶ್ವರನ ಸನ್ನಿಧಿಗೆ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ