ಶ್ವಾನ ಹೇಳಿದ ಭವಿಷ್ಯ

 

ಧರ್ಮಸ್ಥಳದಲ್ಲಿ  ಲಕ್ಷದೀಪೋತ್ಸವ.ಅಕ್ಕನ ಮಗಳು ತುಂಬಾ ಖುಷಿಯಲ್ಲಿದ್ದಳು. ಅಲ್ಲಿಗೆ ಹೋದ ಮೇಲೆ ಏನೇನು ಮಾಡಬೇಕು, ತಿನ್ನಬೇಕು ಎಂಬ ಪಟ್ಟಿಯನ್ನು ದೊಡ್ಡ ಸ್ವರದಲ್ಲಿ ಹೇಳುತ್ತ್ತಿದ್ದಳು. "ಮೆಲ್ಲಗೆ ಹೇಳು" ಎಂದರೂ, ಲೌಡ್ ಸ್ಪೀಕರ್ ಸಣ್ಣದಾಗುವುದಿಲ್ಲ  ಎಂಬುದು ನನಗೆ ತಿಳಿಯದ ವಿಷಯವೇನಲ್ಲ. ಹಿಂದಿನ ದಿನವೇ ಜ್ವರ ಬಂದ ಕಾರಣ ಐಸ್ ಕ್ರೀಮ್ ತಿನ್ನಬೇಡ ವೆಂದು ಪದೇ ಪದೇ ನೆನಪಿಸುತ್ತಿದ್ದೆ. ಎಂದಿನಂತೆ "ಹೇಳಿದ್ದನ್ನೇ ಹೇಳಬೇಡ" ಎನ್ನಲಿಲ್ಲ. "ಓ...ಕೆ.. ಚಿಕ್ಕಮ್ಮ" ನಾಟಕೀಯವಾಗಿ ನುಡಿದಳು. ಹೋಗಿದ್ದೂ ಆಯಿತು. ಹಿಂತಿರುಗಿ ಬಂದದ್ದೂ ಆಯಿತು. ಏನೆಲ್ಲಾ ಮಾಡಿದೆ, ನೋಡಿದೆ, ತಂದೆ, ತಿಂದೆ ಇವುಗಳ ಸವಿಸ್ತಾರ ವರದಿಯೂ ಆಯಿತು.  ನನಗೆ ಗೋಭಿ ಮಂಚೂರಿ ಕಟ್ಟಿಸಿಕೊಂಡು ಬಂದಿದ್ದಳು. ತಂದ  ಬಿಲ್ಲು,ಬಾಣದ ಆಟಿಕೆಯೊಂದಿಗೆ ಆಡುತ್ತಿದ್ದವಳು ಪಕ್ಕನೆ "ಚಿಕ್ಕಮ್ಮ ಈ ಸರ್ತಿ  ನಾಯಿಯೊಂದು ಭವಿಷ್ಯ ಹೇಳುತ್ತಿತ್ತು.  ನಾವು ಕೇಳಲು  ಹೋಗಿದ್ದೆವು" ಎಂದಳು. "ಏನೆಲ್ಲಾ ಹೇಳಿತು?" ಎಂದೆ.  " ಫಸ್ಟ್ ಕ್ವೆಶ್ಚನ್ ಏನಂದ್ರೆ ಯಾರು ಸ್ಕೂಲಲ್ಲಿ ಫುಲ್ ಮಾರ್ಕ್ಸ್ ತೆಗೀತಾರೆ, ಹೋಮ್ ವರ್ಕ್  ಮಾಡ್ತಾರೆ" ಅಂತ ಅದರ ಓನರ್ ಕೇಳಿದ. ನಾಯಿ ನನ್ನತ್ರ ಬಂದು ನಿಂತಿತು" "ಮತ್ತೆ?" ಎಂದೆ. "ಮತ್ತೆ ಕೇಳಿದ, ಯಾರು ಗಂಡನ ಹತ್ತಿರ ತುಂಬಾ ಖರ್ಚು ಮಾಡಿಸ್ತಾರೆ ಅಂತ , ಅಮ್ಮನ ಹತ್ತಿರ ನಿಂತಿತು" "ಮತ್ತೆ?"  "ಮತ್ತೆ ಏನೇನೋ ಕೇಳಿದ. ಬೇರೆಯವರತ್ರ ನಿಲ್ಲುತ್ತಿತ್ತು.  ಕಡೆಗೆ ತುಂಬಾ ಶ್ರೀಮಂತ ಮಾವ ಸಿಗುವ ವ್ಯಕ್ತಿ ಯಾರು? ಅಂತ ಕೇಳಿದಾಗ ಪುನ: ನನ್ನತ್ರ ಬಂದು ನಿಂತಿತು."  ನಗು ತಡೆಯಾಗಲಿಲ್ಲ ನನ್ನಿಂದ.  ಸ್ವಲ್ಪ ಹೊತ್ತು ಬಿಟ್ಟು  ಅವಳೆಂದಳು 
" ಮೊದಲ ಮತ್ತೆ ಎರಡನೇ ಕ್ವೆಶ್ಚನ್ ಗೆ ನಾಯಿ ಆನ್ಸರ್ ಸರಿ. ಮೂರನೇ ಆನ್ಸರ್ ತಪ್ಪು."  ನಾನಂದೆ "ಅದು ಹೇಗೆ ಹೇಳ್ತಿ?" " ಹೆಚ್ಚಾಗಿ ಫುಲ್ ಮಾರ್ಕ್ಸ್   ತೆಗೆಯುವುದು, ಹೋಮವರ್ಕ್ ಮಾಡುವುದು ಅದು ಸರಿ. ಅಮ್ಮ, ಅಪ್ಪನ ಹತ್ರ ಖರ್ಚು  ಮಾಡಿಸುವುದು ಅದೂ ಸರಿ. ಆದ್ರೆ  ಶ್ರೀಮಂತ ಮಾವ ಸಿಗುವುದು ಅದು ತಪ್ಪು. ನನಗೆ ಮಾವನೇ ಇಲ್ಲವಲ್ಲ " ತನ್ನ ಮಾತನ್ನು ಸಮರ್ಥಿಸಿಕೊಂಡಳು. "ಅದು ಈಗಿನ ವಿಷಯ ಹೇಳಿದ್ದಲ್ಲ, ಮುಂದೆ ನಡೆಯುವುದನ್ನು ಹೇಳಿದ್ದು" ಎಂದೆ ನಗುತ್ತಾ . ನನ್ನನ್ನೇ ಮಿಕಿ ಮಿಕಿ ನೋಡಿದ ಅಕ್ಕನ ಮಗಳಿಗೆ ಏನೂ ಅರ್ಥವಾಗಲಿಲ್ಲ. ಎಂದಿನಂತೆ ಪ್ರಶ್ನೆಗಳ ಮಳೆ ಸುರಿಸದೆ  ಬಾಣ ಬಿಡುವುದರಲ್ಲಿ ತಲ್ಲೀನಳಾದಳು.       

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಪತ್ಬಾಂಧವ

ಜಾನಕಿ ಮತ್ತು ಅವಳ ನಾಯಿ

ಅಂತೂ ನಾನೂ ಒಂದು ಕವನ ಬರೆದೆ