ಅರಿವು

                                                            ಕಥೆ - ೧
ಮೊಬೈಲ್ ನಲ್ಲಿ ತನ್ನ ಗೆಳತಿಗೆ ಸಂದೇಶ ಕಳುಹಿಸುತ್ತಿದ್ದಳು ಮಧುರಾ. ಮನೆಗೆ ಅವಳ ಅಜ್ಜಿಯ ತಂಗಿಯಂದಿರು ಬಂದಿದ್ದರು. ನೆಪ ಮಾತ್ರಕ್ಕೆ  ಅವರೊಂದಿಗೆ ಕುಳಿತಿದ್ದ ಅವಳ ಗಮನವೆಲ್ಲಾ ಮೊಬೈಲ್ ಮೇಲೆ ಕೇಂದ್ರೀಕೃತವಾಗಿತ್ತು.  ಗೆಳತಿಗೆ ವಿಷಯ ತಿಳಿಸಿದಳು. "ಓ! ಅಜ್ಜಿಯಂದಿರ ಹತ್ತಿರ ಚಾಟಿಂಗಾ, ಹಾ?" ಪ್ರಶ್ನಿಸಿದಳು ಗೆಳತಿ. "ಛೇ! ಇಲ್ಲಪ್ಪಾ, ಈ ವಯಸ್ಸಾದವರಲ್ಲಿ ನನಗೇನಿದೆ ಮಾತಾಡುವಂಥದ್ದು? ಹೇಗೆ ತಪ್ಪಿಸಿಕೊಳ್ಳುವುದು ಅಂತ ಯೋಚಿಸುತ್ತಿದ್ದೇನೆ"  ಅಸಡ್ಡೆಯಿಂದ ಉತ್ತರಿಸಿದ ಮಧುರಾ "ನಾನು ಓದಲಿಕ್ಕೆ ಹೋಗುತ್ತೇನೆ ಮಮ್ಮಿ" ಎಂದು ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಮಧುರಾಳಿಗೆ ಯೌವ್ವನ ಶಾಶ್ವತವಲ್ಲ, ತಾನೂ ಮುಂದೊಂದು ದಿನ ಮುದುಕಿಯಾಗುತ್ತೇನೆ ಎಂಬ ಸತ್ಯದ ಅರಿವು ಆಗಲೇ ಇಲ್ಲ. 
                               ಕಥೆ - ೨
"ಯಾರಿದು? ಯಾವಾಗ ನೋಡಿದ್ರೂ ಚಾಟ್ ಮಾಡ್ತಿರ್ತೀಯ? ನಿನ್ನ ಎಲ್ಲ ಕಾಲೇಜ್  ಫೋಟೋ ದಲ್ಲೂ  ಜೊತೆಗೆ ನಿಂತಿರ್ತಾನೆ,  ಇಷ್ಟು ಸಲಿಗೆ ಸರಿ ಅಲ್ಲ ಧರಿತ್ರಿ"  ಅವಳ ಅಮ್ಮ ಜೋರು ಮಾಡಿದಳು. "ಅಯ್ಯೋ  ಅಮ್ಮ , ಅವನು ನನ್ನ  ಬೆಸ್ಟ್ ಫ್ರೆಂಡ್. ನಮ್ಮಿಬ್ಬರ  ವೇವ್ ಲೆಂತ್ ಚೆನ್ನಾಗಿ ಮ್ಯಾಚ್ ಆಗುತ್ತೆ ಅದಿಕ್ಕೆ ಜೊತೆಯಾಗಿ ಇರ್ತೀವಿ. ಏನೋ ಗೊತ್ತಿಲ್ಲ, ಅವನ ಜೊತೆ ಯಾವುದೇ ವಿಷಯ ಶೇರ್ ಮಾಡ್ಕೊಳ್ಳೋಕೆ  ಹೆಸಿಟೇಶನ್ ಅನ್ನೋದೇ ಆಗಲ್ಲ.  ಅವನಿಗೂ ಹಾಗೆ ಅಂತೆ ". "ಫ್ರೆಂಡ್ ಶಿಪ್ ಎಲ್ಲ ಓಕೇ.  ಆದ್ರೆ ಹೆಚ್ಚು ಸಲಿಗೆ ಒಳ್ಳೇದಲ್ಲ.  ನೋಡೋ ಜನರು ತಪ್ಪು ತಿಳ್ಕೊಂಡ್ರೆ ? ಮತ್ತೆ ಅದೇನದು ನನ್ನ ಹತ್ತಿರಾನೂ  ಹೇಳ್ಕೊಳ್ಳಲಿಕ್ಕೆ ಆಗ್ದೇ ಇರುವಂತಹದ್ದು "  ಅಮ್ಮನಿಗೆ ಮಗಳು ತನ್ನಿಂದ ದೂರವಾದಂಥ ಅನುಭವ.  
" ಇರುತ್ತೆ ಅಮ್ಮ ,ಎಲ್ಲಾನೂ ನಿನ್ನತ್ರ ಹೇಳೋಕ್ಕಾಗಲ್ಲ. ನೀನು ಯಾವ ಕಾಲದಲ್ಲಿದ್ದಿ? ಈಗ ಇದೆಲ್ಲ ಕಾಮನ್ ಗೊತ್ತಾ? ಸುಮ್ಮನೆ ನೀನು ಎಲ್ಲಾದಕ್ಕೂ ಬುದ್ಧಿ ಹೇಳೋಕೆ ಬರಬೇಡ" ಎಂದು ಕಾಲೇಜಿಗೆ ಹೊರಟ ಧರಿತ್ರಿಗೆ  ಅಮ್ಮನ  ಬೈಗುಳದ ಹಿಂದಿನ ಪ್ರೀತಿಯ, ಕಾಳಜಿಯ ಅರಿವು ಆಗಲೇ ಇಲ್ಲ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜಾನಕಿ ಮತ್ತು ಅವಳ ನಾಯಿ

ಆಪತ್ಬಾಂಧವ

ಅಂತೂ ನಾನೂ ಒಂದು ಕವನ ಬರೆದೆ