ಅಡ್ಡ(nick) ಹೆಸರಿನ ಮಹತ್ವ!
"ಚಿಕ್ಕಮ್ಮ, ನಿನ್ನ ನಿಕ್ ನೇಮ್ ಏನು?" "ನಂಗೆ ನಿಕ್ ನೇಮ್ ಇಲ್ಲ" ಚಟ್ಟಿಗೆ ನೀರೆರೆಯುತ್ತಿದ್ದ ನಾನೆಂದೆ. "ಯಾಕಿಲ್ಲ, ಎಲ್ಲರಿಗೂ ನಿಕ್ ನೇಮ್ ಇರುತ್ತದಂತೆ,ನಿನಗೆ ಯಾಕಿಲ್ಲ? ಹೋಗಲಿ ಅಮ್ಮನಿಗೆ?" ತನ್ವಿ ಪುನಃ ಪ್ರಶ್ನಿಸಿದಳು. " ಅಮ್ಮನಿಗೂ ಇಲ್ಲ, ಯಾಕೆ ಅಂತ ನನ್ನನ್ನು ಕೇಳಬೇಡ, ಅಜ್ಜ ಅಜ್ಜಿಯನ್ನು ಕೇಳು" ನನ್ನತ್ತ ಕನಿಕರದ ನೋಟ ಬೀರಿದವಳು "ಯಾರೂ ಇಡದಿದ್ರೆ ನಾನಿಡ್ತೇನೆ ಆಯ್ತಾ? ಚಿಕ್ಕಿ ಅಂತ ನಿನ್ನ ನಿಕ್ ನೇಮ್" ಎಂದು ಒಳಗೋಡಿದಳು ತನ್ವಿ. ಸರಿ, ಈ ನಿಕ್ ನೇಮ್ ವಿಷಯ ಇಲ್ಲಿಗೆ ನಿಂತಿತಲ್ಲ ಎಂದುಕೊಂಡರೆ ರಾತ್ರಿ ಮತ್ತದೇ ಪ್ರಶ್ನೆ "ಅಜ್ಜ, ನೀವು ನನಗೊಂದು ನಿಕ್ ನೇಮ್ ಇಡಬೇಕು,ಹಾಗೇ ಕರೀಬೇಕು" "ನಿನ್ನ ನಿಕ್ ನೇಮ್ ಪುಳ್ಳಿ ಆಯ್ತಾ?" ಅಪ್ಪನ ಮಾತಿನಿಂದ ಅವಳಿಗೆ ಸಮಾಧಾನ ಆದಂತೆ ಕಾಣಲಿಲ್ಲ."ಪುಟ್ಟ ಅಂತ ಕರೀತೇನೆಲ್ಲ ಅದೇ ನಿನ್ನ ನಿಕ್ ನೇಮ್" ನಾನೆಂದೆ. "ಊಹೂಂ, ಅದಲ್ಲ" ಎಂದವಳು ಸುಮ್ಮನಾದಳು. "ಚಿಕ್ಕಮ್ಮ, ನಾನೊಂದು ಹೇಳ್ತೇನೆ" ರಾತ್ರಿ ಮಲಗಿದವಳೆಂದಳು."ಬೇಗ ಹೇಳು" "ನನ್ನನ್ನು ನಿಕ್ ನೇಮ್ ಇಂದ ಕರೀಬೇಕು ನೀನು" ಅಳುವಂತಿತ್ತು ಅವಳ ಧ್ವನಿ. "ಎಂತಾ ಪಿರಿಪಿರಿ ನಿನ್ನದು ,ನಿಕ್ ನೇಮ್ ನಲ್ಲಿ ಎಂತ ಉಂಟು ಸುಮ್ಮನೆ" "ಉಂಟು, ಛೋಟಾ ಭೀಮ್ ನಲ್ಲಿ ಪ್ರಿನ್ಸೆಸ್ ಇಂದುಮತಿ ಯನ್ನು ರಾಜ ಪ್ರೀತಿಯಿಂದ "ಇಂದು " ಎಂದು ಕರೀತಾನೆ. ನಮ್ಮ ಕ್ಲಾಸ್ ನಲ್ಲಿ ಎಲ್ಲರಿಗೂ ನಿಕ್ ನೇಮ್ ಇದೆ,ನನಿಗೆ ಮಾತ್ರ ಇಲ್ಲ. ನಿಕ್ ನೇಮ್ ನಿಂದು ಕಲಿಯದಿದ್ದರೆ ಪ್ರೀತಿ ಇಲ್ಲಂತ ಅರ್ಥ ಅಂತೆ" ಓ! ಇದಾ ವಿಷಯ ಎಂದುಕೊಂಡು "ಅದು, ಇಂದುಮತಿ ಹೆಸರು ಉದ್ದ ಅಲ್ವ ಅದಿಕ್ಕೆ ಅಡ್ಡ ಹೆಸರಿಟ್ಟಿದ್ದು. ನಿನ್ನ ಹೆಸರು ಸಣ್ಣದು ಅದಿಕ್ಕೆ ಅಡ್ಡ ಹೆಸರಿನ ಅಗತ್ಯ ಇಲ್ಲ. ಹೌದು, ಯಾರು ಹೀಗೆಲ್ಲ ಹೇಳಿದ್ದು ನಿನಗೆ?ಪ್ರೀತಿ ಇಲ್ಲದಿದ್ದರೆ ಅಮ್ಮ ನಿಂಗೆ ಶಾಲೆಗೆ ರೆಡಿ ಮಾಡ್ತಾಳಾ? ಅಪ್ಪ ಸ್ಕೂಟಿಯಲ್ಲಿ ಕರಕೊಂಡು ಹೋಗ್ತಾರಾ? ಅಜ್ಜ ಚಾಕಲೇಟ್ ತಂದುಕೊಡ್ತಾರಾ? ಅಜ್ಜಿ ದೋಸೆ ಎರೆದುಕೊಡ್ತಾಳಾ? ನಾವೆಲ್ಲ ನಿನ್ನ ಎಲ್ಲ ಚಾಕರಿ ಮಾಡ್ತೇವಾ? ಪ್ರೀತಿ ಇರುವುದು ಬೇರೆಯವರಿಗೆ ತೋರಿಸುವುದರಲ್ಲಿ ಅಲ್ಲ, ಒಬ್ಬರು ಇನ್ನೊಬ್ಬರಿಗೆ ನಡೆಯುವ ರೀತಿಯಲ್ಲಿ. " ಸಾಧ್ಯವಾದ ರೀತಿಯಲ್ಲಿ ತಿಳಿಸುವ ಪ್ರಯತ್ನ ಮಾಡಿದೆ "ಅದೆಲ್ಲ ನಂಗೊತ್ತಿಲ್ಲ, ನನಗೆ ನಿಕ್ ನೇಮ್ ಬೇಕು" ಅಳಲು ಶುರು ಮಾಡಿದಳು. "ಆಯ್ತು ಮಾರಾಯ್ತಿ ಇಡುವ, ಅದಿಕ್ಕೇನು? ಅಳುವುದೆಂತಕೆ? ಮ್... ಎಂತ ಇಡುದು? ತನು?" "ಬೇಡ" "ಚುಟ್ಕಿ" "ಬೇಡ" "ನಿವಿ! ನಿವಿ ಅಂತ ಕರೀತೇನೆ ಆಯ್ತಾ" ಕೊನೆಗೂ ಸಮಾಧಾನಿಸಿ ನಿದ್ದೆ ಮಾಡಿಸಿದೆ. ಥೇಟು ನನ್ನಂತೆ ಯೋಚನೆ ಮಾಡ್ತಾಳಲ್ಲ ಇವಳು ಎಂದುಕೊಂಡೆ. ನನಗೂ ಒಂದೊಮ್ಮೆ ಇದೇ ಪ್ರಶ್ನೆ ಮೂಡಿತ್ತು. ಸ್ಲಾಮ್ ಬುಕ್ಕಿನಲ್ಲಿ ನಿಕ್ ನೇಮ್ ಜಾಗ ಖಾಲಿ ಬಿಡಬೇಕಾಗಿ ಬಂದಾಗ ಛೇ, ನನಗೂ ಒಂದು ಅಡ್ಡ ಹೆಸರಿದ್ದಿದ್ದರೆ ಅಂತ ಅನಿಸಿದ್ದು ಸುಳ್ಳಲ್ಲ. ಸೋಜಿಗವೆಂದರೆ ಯಾರೂ ನನ್ನನ್ನು,ನನ್ನಕ್ಕನನ್ನು ಅಡ್ಡ ಹೆಸರಿಂದ ಕರೆದೇ ಇಲ್ಲ. ಯಾಕೆ? ಎಂದು ನನಗನಿಸಿತ್ತು. ಆದರೆ ಹೇಳಿರಲಿಲ್ಲ.ಯಾರೂ ಕರೆಯಲೇ ಇಲ್ಲವೇ ಎಂದು ತಲೆ ಕೆರೆದುಕೊಂಡಾಗ ನೆನಪಾಗಿದ್ದು ಪಕ್ಕದ ಮನೆಯ ಆಂಟಿ. ತುಂಬಾ ವರ್ಷಗಳ ಹಿಂದೆ ನಾನು ಸಣ್ಣವಳಿದ್ದಾಗ "ಸೌಜು" ಎಂದು ಕರೆಯುತ್ತಿದ್ದರು. ಕಾಲೇಜಿನ ಗೆಳತಿಯೊಬ್ಬಳು ಅದೇ ರೀತಿ ಕರೆಯುತ್ತಿದ್ದಳು. ಅಮ್ಮ ಒಮ್ಮೊಮ್ಮೆ ಮಾತಿಗೆ ಜನ್ಯ ಎನ್ನುತ್ತಿದ್ದ ನೆನಪು. ಯಾವುದರ ಜನ್ಯ? ಎಂದುಕೊಳ್ಳುತ್ತಿದ್ದೆ. ನನಗೊಂದು ಒಳ್ಳೆಯ ಹೆಸರಿಡಲಿಲ್ಲ ನನ್ನ ಅಪ್ಪ, ಅಮ್ಮ ಎಂದೂ ಅನಿಸಿತ್ತು. ಅಕ್ಕನಿಗೆ ಅರ್ಚನಾ ಎಂದು ಇಡಬೇಕೆಂದು ಮನಸಿನಲ್ಲಿತ್ತು ಅಂತ ಅಮ್ಮ ಹೇಳುತ್ತಿದ್ದಳು. ಅದೇ ಹೆಸರು ನನಗಿಟ್ಟಿದ್ದರೆ ಅಚ್ಚು ಅಂತಲೋ, ಅರ್ಚು ಅಂತಲೋ ಕರೆಯಬಹುದಿತ್ತು. ಆದರೂ ಸೌಜನ್ಯ ವಿಶೇಷವಾದ ಹೆಸರು ಅಲ್ಲವೆ ಎಂದು ನನಗೆ ನಾನೇ ಹೆಮ್ಮೆ ಪಟ್ಟುಕೊಂಡಿದ್ದೆ. ಹಾಗೆ ನೋಡಿದರೆ ಅಪ್ಪನಿಗೂ ನಿಕ್ ನೇಮ್ ಇಲ್ಲ. ಅಲ್ಲ, ಇದೆಯಲ್ಲ "ಮಗು!" ದೂರದ ಅತ್ತೆಯೊಬ್ಬರು ನೋಡುವಾಗಲೇ ತಿಳಿಯುತ್ತದೆ, ಮಗುವಿನ ಮಗಳಲ್ಲವೇ? ಎಂದಾಗ "ಮಗುವಿಗೆ ಮಗಳು?" ಮನದಲ್ಲಿ ನಕ್ಕಿದ್ದೆ. ಅಪ್ಪನ ತಮ್ಮಂದಿರಲ್ಲಿ ಕೆಲವರಿಗಿದೆ,ಕೆಲವರಿಗಿಲ್ಲ. ಯಾಕಿಲ್ಲ, ಕೇಳುವ ಎಂದರೆ ಅಜ್ಜ,ಅಜ್ಜಿ ಬದುಕಿಯೇ ಇಲ್ಲ. ಅಮ್ಮನ ಅಣ್ಣಂದಿರಿಗೂ,ಅಕ್ಕಂದಿರಿಗೂ ಇವೆ. ಮಗು,ಒಪ್ಪ ಕುಂಞಿ,ಮೋನು,ಮುದ್ದು,ಮಾಣಿ, ಅಬ್ಬು, ಸುಬ್ಬಮ್ಮ,ದೊಡ್ಡಮೋಳು ಅಬ್ಬಬ್ಬಾ! ನಾನಾ ಥರದ ಹೆಸರುಗಳು. ಅಮ್ಮನಿಗೂ ಅಡ್ಡ ಹೆಸರಿದೆ "ಸಣ್ಣಮೋಳು!" ಮೋಳು ಎಂದರೆ ಮಲಯಾಳಂನಲ್ಲಿ ಮಗಳು ಎಂದರ್ಥವಂತೆ. ಛೇ ಇದೆಂಥಾ ಅಡ್ಡ ಹೆಸರು ಎಂದುಕೊಂಡಿದ್ದುಂಟು. ಆದರೆ ಕಡೆಗೆ ಹುಟ್ಟಿದ ಚಿಕ್ಕಮ್ಮ ನಿಗೆ ಮಾತ್ರ ಅಡ್ಡ ಹೆಸರು ಇಡಲು ಮರೆತೇ ಬಿಟ್ಟರು ನನ್ನಜ್ಜಿ! ನನ್ನ ಮಾವಂದಿರನ್ನೆಲ್ಲ ಅಡ್ಡ ಹೆಸರಿನಿಂದಲೇ ಕರೆಯುವ ನಾನು, ಯಾರಾದರೂ ಅವರ ನೈಜ ಹೆಸರನ್ನು ಕೇಳಿದಾಗ ಈಗಲೂ ಯೋಚಿಸುವಂತಾಗುತ್ತದೆ. ನನ್ನ ಕಸಿನ್ ಗಳಿಗೂ ಅಡ್ಡ ಹೆಸರಿದೆ. ನನ್ನಕ್ಕನಿಗೆ,ನನಗೆ ಮಾತ್ರ ಇಲ್ಲ. ಯಾಕೆ? ಎಂದು ಅಕ್ಕನ ಮಗಳಿಗೆ ಅನಿಸಿದ್ದರಲ್ಲಿ ವಿಶೇಷವಿಲ್ಲ. ಸರಿ,ಇಷ್ಟೆಲ್ಲಾ ರಗಳೆ ಮಾಡಿದ ತನ್ವಿ ನಾನು ಹೇಳಿದ ಮಾತು ಪ್ರಭಾವ ಬೀರಿದ ಪರಿಣಾಮವೋ ಏನೋ, ನಿಕ್ ನೇಮ್ ಸುದ್ದಿ ಮತ್ತೆ ತೆಗೆಯಲೇ ಇಲ್ಲ, ಚಿಕ್ಕಿ ಅಂತ ಕರೆಯಲೂ ಇಲ್ಲ,ಅಲ್ಲಿಗೆ ಅಡ್ಡ ಹೆಸರಿನ ಸಮಸ್ಯೆ ಸುಖಾಂತ್ಯವಾಯಿತೆಂದೇ ಅರ್ಥ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ