ಶ್ವಾನ ಹೇಳಿದ ಭವಿಷ್ಯ
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ.ಅಕ್ಕನ ಮಗಳು ತುಂಬಾ ಖುಷಿಯಲ್ಲಿದ್ದಳು. ಅಲ್ಲಿಗೆ ಹೋದ ಮೇಲೆ ಏನೇನು ಮಾಡಬೇಕು, ತಿನ್ನಬೇಕು ಎಂಬ ಪಟ್ಟಿಯನ್ನು ದೊಡ್ಡ ಸ್ವರದಲ್ಲಿ ಹೇಳುತ್ತ್ತಿದ್ದಳು. "ಮೆಲ್ಲಗೆ ಹೇಳು" ಎಂದರೂ, ಲೌಡ್ ಸ್ಪೀಕರ್ ಸಣ್ಣದಾಗುವುದಿಲ್ಲ ಎಂಬುದು ನನಗೆ ತಿಳಿಯದ ವಿಷಯವೇನಲ್ಲ. ಹಿಂದಿನ ದಿನವೇ ಜ್ವರ ಬಂದ ಕಾರಣ ಐಸ್ ಕ್ರೀಮ್ ತಿನ್ನಬೇಡ ವೆಂದು ಪದೇ ಪದೇ ನೆನಪಿಸುತ್ತಿದ್ದೆ. ಎಂದಿನಂತೆ "ಹೇಳಿದ್ದನ್ನೇ ಹೇಳಬೇಡ" ಎನ್ನಲಿಲ್ಲ. "ಓ...ಕೆ.. ಚಿಕ್ಕಮ್ಮ" ನಾಟಕೀಯವಾಗಿ ನುಡಿದಳು. ಹೋಗಿದ್ದೂ ಆಯಿತು. ಹಿಂತಿರುಗಿ ಬಂದದ್ದೂ ಆಯಿತು. ಏನೆಲ್ಲಾ ಮಾಡಿದೆ, ನೋಡಿದೆ, ತಂದೆ, ತಿಂದೆ ಇವುಗಳ ಸವಿಸ್ತಾರ ವರದಿಯೂ ಆಯಿತು. ನನಗೆ ಗೋಭಿ ಮಂಚೂರಿ ಕಟ್ಟಿಸಿಕೊಂಡು ಬಂದಿದ್ದಳು. ತಂದ ಬಿಲ್ಲು,ಬಾಣದ ಆಟಿಕೆಯೊಂದಿಗೆ ಆಡುತ್ತಿದ್ದವಳು ಪಕ್ಕನೆ "ಚಿಕ್ಕಮ್ಮ ಈ ಸರ್ತಿ ನಾಯಿಯೊಂದು ಭವಿಷ್ಯ ಹೇಳುತ್ತಿತ್ತು. ನಾವು ಕೇಳಲು ಹೋಗಿದ್ದೆವು" ಎಂದಳು. "ಏನೆಲ್ಲಾ ಹೇಳಿತು?" ಎಂದೆ. " ಫಸ್ಟ್ ಕ್ವೆಶ್ಚನ್ ಏನಂದ್ರೆ ಯಾರು ಸ್ಕೂಲಲ್ಲಿ ಫುಲ್ ಮಾರ್ಕ್ಸ್ ತೆಗೀತಾರೆ, ಹೋಮ್ ವರ್ಕ್ ಮಾಡ್ತಾರೆ" ಅಂತ ಅದರ ಓನರ್ ಕೇಳಿದ. ನಾಯಿ ನನ್ನತ್ರ ಬಂದು ನಿಂತಿತು" "ಮತ್ತೆ?" ಎಂದೆ. "ಮತ್ತೆ ಕೇಳಿದ, ಯಾರು ಗಂಡನ ಹತ್ತಿರ ತುಂಬಾ ಖರ್ಚು ಮಾಡಿಸ್ತಾರೆ ಅಂತ , ಅಮ್...