ಅಡ್ಡ(nick) ಹೆಸರಿನ ಮಹತ್ವ!
"ಚಿಕ್ಕಮ್ಮ, ನಿನ್ನ ನಿಕ್ ನೇಮ್ ಏನು?" "ನಂಗೆ ನಿಕ್ ನೇಮ್ ಇಲ್ಲ" ಚಟ್ಟಿಗೆ ನೀರೆರೆಯುತ್ತಿದ್ದ ನಾನೆಂದೆ. "ಯಾಕಿಲ್ಲ, ಎಲ್ಲರಿಗೂ ನಿಕ್ ನೇಮ್ ಇರುತ್ತದಂತೆ,ನಿನಗೆ ಯಾಕಿಲ್ಲ? ಹೋಗಲಿ ಅಮ್ಮನಿಗೆ?" ತನ್ವಿ ಪುನಃ ಪ್ರಶ್ನಿಸಿದಳು. " ಅಮ್ಮನಿಗೂ ಇಲ್ಲ, ಯಾಕೆ ಅಂತ ನನ್ನನ್ನು ಕೇಳಬೇಡ, ಅಜ್ಜ ಅಜ್ಜಿಯನ್ನು ಕೇಳು" ನನ್ನತ್ತ ಕನಿಕರದ ನೋಟ ಬೀರಿದವಳು "ಯಾರೂ ಇಡದಿದ್ರೆ ನಾನಿಡ್ತೇನೆ ಆಯ್ತಾ? ಚಿಕ್ಕಿ ಅಂತ ನಿನ್ನ ನಿಕ್ ನೇಮ್" ಎಂದು ಒಳಗೋಡಿದಳು ತನ್ವಿ. ಸರಿ, ಈ ನಿಕ್ ನೇಮ್ ವಿಷಯ ಇಲ್ಲಿಗೆ ನಿಂತಿತಲ್ಲ ಎಂದುಕೊಂಡರೆ ರಾತ್ರಿ ಮತ್ತದೇ ಪ್ರಶ್ನೆ "ಅಜ್ಜ, ನೀವು ನನಗೊಂದು ನಿಕ್ ನೇಮ್ ಇಡಬೇಕು,ಹಾಗೇ ಕರೀಬೇಕು" "ನಿನ್ನ ನಿಕ್ ನೇಮ್ ಪುಳ್ಳಿ ಆಯ್ತಾ?" ಅಪ್ಪನ ಮಾತಿನಿಂದ ಅವಳಿಗೆ ಸಮಾಧಾನ ಆದಂತೆ ಕಾಣಲಿಲ್ಲ."ಪುಟ್ಟ ಅಂತ ಕರೀತೇನೆಲ್ಲ ಅದೇ ನಿನ್ನ ನಿಕ್ ನೇಮ್" ನಾನೆಂದೆ. "ಊಹೂಂ, ಅದಲ್ಲ" ಎಂದವಳು ಸುಮ್ಮನಾದಳು. "ಚಿಕ್ಕಮ್ಮ, ನಾನೊಂದು ಹೇಳ್ತೇನೆ" ರಾತ್ರಿ ಮಲಗಿದವಳೆಂದಳು."ಬೇಗ ಹೇಳು" "ನನ್ನನ್ನು ನಿಕ್ ನೇಮ್ ಇಂದ ಕರೀಬೇಕು ನೀನು" ಅಳುವಂತಿತ್ತು ಅವಳ ಧ್ವನಿ. "ಎಂತಾ ಪಿರಿಪಿರಿ ನಿನ್ನದು ,ನಿಕ್ ನೇಮ್ ನಲ್ಲಿ ಎಂತ ಉಂಟು ಸುಮ್ಮನೆ" "ಉಂಟು, ಛೋಟಾ ಭೀಮ್ ನಲ್ಲಿ ಪ್ರಿನ್ಸೆಸ್ ಇಂದ...