ಒಂದು ಕನಸಿನ ಕಥೆ
ಬಸ್ಸು ಎಂದಿನಂತೆ ಜನರಿಂದ ತುಂಬಿ ತುಳುಕುತ್ತಿತ್ತು. ಅಂತೂ ಹೇಗೋ ಮಾಡಿ ಸೀಟನ್ನು ಹಿಡಿದಳು ತೇಜಸ್ವಿನಿ. ನಿತ್ಯವೂ ಇದೇ ಗೋಳು. ಆದರೆ ಏನು ಮಾಡುವುದು,ಕಾಲೇಜಿಗೆ ಹೋಗಲು ಇದೇ ಬಸ್ ಆಗಬೇಕು. "ಇನ್ನೊಂದು ವರ್ಷ ಅಷ್ಟೆ, ಆಮೇಲೆ ಈ ಬಸ್ ಓಡಾಟ ಮುಗೀತದೆ" ಮನದಲ್ಲಿ ಅಂದುಕೊಂಡಳು. ಮುಂದಿನ ಸ್ಟಾಪ್ ನಲ್ಲಿ ಮಗು ವನ್ನೆತ್ತಿಕೊಂಡ ಮಹಿಳೆ ಒಬ್ಬಳು ಬಸ್ ಹತ್ತಿದಳು. ಸೀಟ್ನಲ್ಲಿ ಕೂತ ತೇಜಸ್ವಿನಿ ಜಾಗ ಬಿಟ್ಟು ಕೊಡಲೆತ್ನಿಸಿದಾಗ ಕುಳಿತು ಕೊಳ್ಳುವಂತೆ ಸನ್ನೆ ಮಾಡಿದ ಮಹಿಳೆ ತನ್ನ ಕೈಯಲ್ಲಿ ದ್ದ ಮಗುವನ್ನು ಅವಳಿಗೆ ಕೊಟ್ಟಳು. ಏನಾಶ್ಚರ್ಯ! ಕಿಂಚಿತ್ತೂ ಕೊಸರಾಡದೆ ತೇಜಸ್ವಿನಿ ತೊಡೆಯಲ್ಲಿ ಕುಳಿತು ಕೊಂಡಿತು. ಅವಳ ಕೂದಲಿನಲ್ಲಿ
ಆಟವಾಡತೊಡಗಿತು. "ಎಲ್ಲಿ ಇಳಿಯುವುದು ನೀವು?" ಆ ಮಹಿಳೆಯನ್ನು ವಿಚಾರಿಸಿದಳು. "ಕಾಲೇಜು ಸ್ಟಾಪಿನ ಹಿಂದಿನ ಸ್ಟಾಪ್". ಮತ್ತೇನು ಮಾತನಾಡಲು ತೋಚದೆ ಕಿಟಕಿಯತ್ತ ದೃಷ್ಟಿ ಹಾಯಿಸಿದಳು. ಕಾಲೇಜು ತಲುಪಲು ಇನ್ನು ಇಪ್ಪತ್ತು ನಿಮಿಷಗಳು ಉಳಿದಿದೆ ಎನ್ನುವಷ್ಟರಲ್ಲಿ ಒಂದು ಸ್ಟಾಪ್ ಬಂದಿತು. ತೇಜಸ್ವಿನಿ ನೋಡುತ್ತಿರುವಂತೆ ಆ ಮಹಿಳೆ ಜನ ಜಂಗುಳಿಯ ಮಧ್ಯೆ ತೂರಿ ಮುಂಬಾಗಿಲಿನಿಂದ ಇಳಿದುಬಿಟ್ಟಳು. "ಓಯ್..ನಿಮ್ಮ ಮಗು" ಹೇಳಲೆತ್ನಿಸಿದರೂ ಗಂಟಲಿನಿಂದ ಸ್ವರ ಬರುತ್ತಿಲ್ಲ. "ಅಯ್ಯೋ, ಇಳಿದು ಬಿಟ್ಟರಲ್ಲ ಏನು ಮಾಡಲಿ, ಬ್ಯಾಗ್ ಮರೆಯುವುದು ಕೇಳಿದ್ದೇನೆ. ಮಗುವನ್ನು ಮರೆತು ಹೋಗ್ತಾರಾ ಯಾರಾದರೂ? ಇನ್ನು ಅವರನ್ನು ಹೇಗೆ ಹುಡುಕಲಿ?" ಬೆವರಿದಳು ತೇಜಸ್ವಿನಿ. "ಮಗುವನ್ನು ಸೀಟಲ್ಲಿ ಬಿಟ್ಟುಬಿಡು, ನಿನಗೇಕೆ ಇಲ್ಲದ ತಲೆಬಿಸಿ?" ಬುದ್ಧಿ ಹೇಳಿತು. "ಮಾತನಾಡಲು ಬರದ ಕಂದಮ್ಮನನ್ನು ಬಿಟ್ಟು ಹೋಗುವುದು ಸರಿಯಲ್ಲ" ಮನಸ್ಸು ಎಚ್ಚರಿಸಿತು. ಬುದ್ದಿ ಹೇಳಿದಂತೆ ಮಾಡಲು ನಿರ್ಧರಿಸಿದ ತೇಜಸ್ವಿನಿ ತನ್ನ ನಿಲುಗಡೆಯ ಸ್ಥಳ ತಲುಪುತ್ತಲೇ ಮಗುವನ್ನು ಸೀಟಲ್ಲಿ ಬಿಟ್ಟು ಇಳಿಯ ಹೊರಟಳು. "ಏ ಹುಡುಗಿ ಮಗುವನ್ನು ಬಿಟ್ಟು ಎಲ್ಲಿ ಹೋಗ್ತೀ?" ಪಕ್ಕದಲ್ಲಿ ಕುಳಿತವಳು ಏರುದನಿಯಲ್ಲಿ ಪ್ರಶ್ನಿಸಿದಳು. "ಅ..ಅ..ದೂ ನನ್ನ ಮಗುವಲ್ಲ. ಆ ಹೆಂಗಸು ಇಳಿದು ಹೋದಳಲ್ಲ ಅವಳದ್ದು" ತೊದಲಿದಳು. "ಯಾವ ಹೆಂಗಸು? ನಾನು ನೋಡಲಿಲ್ಲವಲ್ಲ? ಸುಳ್ಳು ಹೇಳ್ತೀಯಾ?" ಬಸ್ಸಿನಲ್ಲಿದ್ದವರ ಗಮನವೆಲ್ಲ ತೇಜಸ್ವಿನಿಯತ್ತ ಹರಿಯಿತು. ಮೈ ಬಿಸಿಯಾದೆಂತೆನಿಸಿತು ಅವಳಿಗೆ. ಅಷ್ಟರಲ್ಲಿ ಆ ಇವಳೆಡೆಗೆ ಮಗು ಕೈ ಚಾಚುತ್ತಾ "ಮ್ಮ..ಆ.." ಎಂದು ಅಳಲಾರಂಭಿಸಿತು. "ನೋಡಿ,ಯಾರು ಸುಳ್ಳು ಹೇಳದ್ರೂ ಮಕ್ಕಳು ಮಾತ್ರ ಸುಳ್ಳು ಹೇಳುವುದಿಲ್ಲ" "ಹೌದು ಅದು ನಿಜ" ಕೆಲವರೆಂದರು. ಎಲ್ಲರ ಸಂಶಯಾತ್ಮಕ ದ್ರಷ್ಟಿ ಸಹಿಸಲಾಗದೆ "ಅಲ್ಲ, ನಾನಲ್ಲ" ಎಂದ ತೇಜಸ್ವಿನಿ ಕಣ್ಣು ಮುಚ್ಚಿ ಗಟ್ಟಿಯಾಗಿ ಕಿರುಚಿದಳು. ಮುಂದೆ .....?
ಕಣ್ಣು ಬಿಟ್ಟ ತೇಜಸ್ವಿನಿ ತನ್ನ ಹಾಸಿಗೆ ಮೇಲಿದ್ದಳು. ಆಗಷ್ಟೇ ಬೆಳಕು ಹರಿದಿತ್ತು. ಗಡಿಯಾರದ ಮುಳ್ಳು ಆರನ್ನು ಸೂಚಿಸುತ್ತಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ