ಬಿಗ್ ಬಾಸ್ - ಸಮಾಜದ ಕೈಗನ್ನಡಿ
"ಏನಿದೆ ಬಿಗ್ ಬಾಸ್ ನಲ್ಲಿ ಅಂಥಾದ್ದು? ಒಂದಿಷ್ಟು ಸೆಲೆಬ್ರಿಟೀಸ್ ಇರ್ತಾರೆ. ಟಾಸ್ಕ್ ಕೊಡ್ತಾರೆ , ಅದನ್ನು ಇವ್ರು ಮಾಡಬೇಕು. ಮತ್ತೆ ಒಂದೋ ಎರಡೋ ಲವ್ ಸ್ಟೋರೀಸ್ ಶುರುವಾಗುತ್ತದೆ, ಎಲ್ಲಾ ಮೊದಲೇ ಪ್ಲಾನ್ ಮಾಡಿರ್ತಾರೆ. ಗಂಡು, ಹೆಣ್ಣು ಕುಣೀತಾರೆ, ನಲೀತಾರೆ. ಆ ಮಲಯಾಳಂ ಚಾನಲ್ ನೋಡಿ ಕಲೀಬೇಕು ಈ ಕನ್ನಡದವರೆಲ್ಲಾ, ಎಷ್ಟು ನ್ಯಾಚುರಲ್ ಆಗಿ ಇರ್ತಾರೆ " ಕೇರಳದಲ್ಲಿರುವ ಸಂಬಂಧಿಯೋರ್ವರ ಮಾತು ಕೇಳಿ ಕನ್ನಡಿಗಳಾದ ನನಗೂ ಹಾಗೆ ಅನ್ನಿಸಿತ್ತು. ಆದರೂ ನಂಗಿಷ್ಟವಾದ ಸೀರಿಯಲ್, ಸಿನೆಮಾದ ವ್ಯಕ್ತಿಗಳೇ ಇದ್ದುದರಿಂದ ಮನಸ್ಸು ತಡೆಯಲಿಲ್ಲ. ಜೊತೆಗೆ ಅವರ ವ್ಯಕ್ತಿತ್ವದ ಪರಿಚಯ, ಏನಿದೆಯೆಂದು ನೋಡಿಯೇ ಬಿಡುವ ಎಂದು ನೋಡಲಾರಂಭಿಸಿದೆವು ಮನೆ ಮಂದಿಯೆಲ್ಲ. ಸುಂದರವಾದ ಮನೆ, ಮನೆಯೊಳಗೆ ಬೇರೆ ಬೇರೆ ವ್ಯಕ್ತಿತವುಳ್ಳ ಒಂದಷ್ಟು ಸ್ಪರ್ಧಿಗಳು. ಕೆಲವರು ನೇರ ಮಾತಿನವರು, ಇನ್ನೂ ಕೆಲವರು ಗುಂಪುಗಾರಿಕೆಯವರು, ತಮ್ಮ ಮಾತಿನಂತೆ ನಡೆಯದವರನ್ನು ಬೆಣ್ಣೆಯಿಂದ ಕೂದಲನ್ನು ತೆಗೆದಂತೆ ನಾಜೂಕಾಗಿ ಅತ್ತ ಸರಿಸಿಬಿಡುತ್ತಿದ್ದರು. ಒಬ್ಬ ಅತಿಯಾದ ಮುಂಗೋಪಿ, ಇನ್ನೊಬ್ಬ ವ್ಯಂಗ್ಯವಾಗಿ ಮಾತಾಡುವವನು, ಮತ್ತೊಬ್ಬ ಅಪಹಾಸ್ಯ ಮಾಡುವನು. ಒಬ್ಬಾಕೆ ತುಂಬಾ ಚೆನ್ನಾಗಿ ಅಡಿಗೆ ಮಾಡುತ್ತಾ , ಇತರರನ್ನು ನಯವಾಗಿ ತನ್ನ ಮಾತಿನಂತೆ ನಡೆಸಿಕೊಳ್ಳುವಳು, ಹಿಂದಿನ ಕಾಲದ ಅತ್ತೆಯಂದಿರಂತೆ. ಕೆಸರ...